ನವದೆಹಲಿ,ಜ.11- ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ರಥಯಾತ್ರೆ ನಡೆಸಿದ್ದ ಭೀಷ್ಮ ಪಿತಾಮಹ ಎಲ್.ಕೆ.ಅಡ್ವಾಣಿಯವರು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿ ರುವ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ ಅಡ್ವಾಣಿಯವರ ವಯಸ್ಸಿನ ಹಿನ್ನೆಲೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರುವುದು ಬೇಡ ಎಂದು ರಾಮಲಲ್ಲಾ ಟ್ರಸ್ಟ್ ಹೇಳಿತ್ತು.
ಇದು ತೀವ್ರ ವಿವಾದವನ್ನು ಸೃಷ್ಟಿಸಿತ್ತು. ಕೊನೆಗೆ ವಿಶ್ವ ಹಿಂದೂ ಪರಿಷತ್ ಅಡ್ವಾಣಿಯವರಿಗೆ ಆಹ್ವಾಣ ನೀಡಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿತ್ತು. ಅಯೋಧ್ಯೆಯ ಸಮಾರಂಭದಲ್ಲಿ ಅಡ್ವಾಣಿಯವರು ಭಾಗವಹಿಸುವ ಬಗ್ಗೆ ವಿಹೆಚ್ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
28 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ : ಸಚಿವ ಮುನಿಯಪ್ಪ
ಅಡ್ವಾಣಿ ಮತ್ತು ಮತ್ತೊಬ್ಬರು ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಸಮಾರಂಭಕ್ಕೆ ಹಾಜರಾಗದಂತೆ ಮನವಿ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಂತರದಲ್ಲಿ ಉಭಯ ನಾಯಕರ ಮನೆಗೆ ತೆರಳಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವ ಫೋಟೊಗಳು ಪ್ರಕಟಗೊಂಡಿದ್ದವು.
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಾವಿರಾರು ಸಂತರ ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಏತನ್ಮಧ್ಯೆ, ಅದ್ದೂರಿ ಸಮಾರಂಭಕ್ಕೆ ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ರಾಮಮಂದಿರಕ್ಕೆ ಈಗಾಗಲೇ 1,100 ಕೆಜಿ ತೂಕದ ದೀಪ, ಎಂಟು ಲೋಹಗಳಿಂದ ಮಾಡಿದ 2,100 ಕೆಜಿ ತೂಕದ ಗಂಟೆ ಸೇರಿದಂತೆ ಭಾರತ ಮತ್ತು ವಿದೇಶಗಳಿಂದ ವಿಶೇಷ ಕೊಡುಗೆಗಳನ್ನು ಕಳುಹಿಸಲಾಗಿದೆ.
ಕಾರ್ಯಕ್ರಮದ ಮೊದಲು, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಆರ್‍ಎಸ್‍ಎಸ್ ಮತ್ತು ಅದರ ಅಂಗಸಂಸ್ಥೆಗಳ ಸ್ವಯಂಸೇವಕರು ದೇಶಾದ್ಯಂತ ಜನರಿಗೆ ರಾಮ ಮಂದಿರಕ್ಕೆ ಭೇಟಿ ನೀಡುವಂತೆ ಮಂತ್ರಾಕ್ಷತೆ ಸಹಿತ ಆಹ್ವಾನ ನೀಡುತ್ತಿದ್ದಾರೆ. ಪ್ರಾಣ ಪ್ರತಿಷ್ಠೆಯ ದಿನ ಮನೆಯಲ್ಲಿ ಹಾಗೂ ನೆರೆಹೊರೆಯಲ್ಲಿರುವ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
ನಿರುದ್ಯೋಗ ನಿವಾರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ : ಜೈರಾಮ್
ಅಡ್ವಾಣಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಅವರಿಗಾಗಿ ಅಯೋಧ್ಯೆಯಲ್ಲಿ ವೈದ್ಯಕೀಯ ತಂಡ ನಿಯೋಜನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರಕ್ಕಾಗಿ ರಥಯಾತ್ರೆ ಮಾಡಿದ್ದ ಲಾಲ್ ಕೃಷ್ಣ ಅಡ್ವಾಣಿ ಅಯೋಧ್ಯೆ ಹೋರಾಟದ ಪ್ರಮುಖ ರೂವಾರಿಯಾಗಿದ್ದಾರೆ.