ಲಂಡನ್,ಮಾ.8– ಬಂಧನದ ಭೀತಿಯಿಂದಾಗಿ ದೇಶ ಬಿಟ್ಟು ಪರಾರಿಯಾಗಿರುವ ಬಹುಕೋಟಿ ವಂಚಕ ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್ಪೋರ್ಟ್ ಅನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮೀಷನ್ ಗೆ ಒಪ್ಪಿಸಿದ್ದಾರೆ.
ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಮೋದಿ, ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟುನ ಪೌರತ್ವವನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಇದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್, ಖಚಿತಪಡಿಸಿದ್ದಾರೆ. ಲಲಿತ್ ಮೋದಿ ಅವರು ಲಂಡನ್ನಲ್ಲಿರುವ ಭಾರತೀಯ ಹೈಕಮೀಷನ್ನಲ್ಲಿ ತಮ ಪಾಸ್ಪೋರ್ಟ್ ಅನ್ನು ಸರೆಂಡರ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ.
ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾನೂನಿನ ಕಾರ್ಯವಿಧಾನಗಳ ಬೆಳಕಿನಲ್ಲಿ ಈ ಅರ್ಜಿಯನ್ನು ಪರಿಶೀಲಿಸಲಾಗುವುದು. ಅವರು ವನವಾಟು ಪೌರತ್ವವನ್ನು ಪಡೆದಿರುವುದು ನಮಗೆ ತಿಳಿದಿದೆ. ಕಾನೂನಿನಡಿ ನಾವು ಅವರ ವಿರುದ್ಧ ಪ್ರಕರಣವನ್ನು ಮುಂದುವರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸುವಾಗ ಲಲಿತ್ ಮೋದಿ ಅವರ ಮೇಲೆ ಬಿಡ್ಡಿಂಗ್ ಅಕ್ರಮಗಳು ಮತ್ತು ಹಣ ವರ್ಗಾವಣೆ ಹಾಗೂ ದೇಶಿ ನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿತ್ತು.
ಲಲಿತ್ ಮೋದಿ ಅವರು ಮುಂಬೈನಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿಚಾರಣೆಯಲ್ಲಿ ಒಮೆ ಮಾತ್ರ ಹಾಜರಾಗಿದ್ದರು. ಮೇ 2010ರಲ್ಲಿ ಅವರು ದೇಶದಿಂದ ಪಲಾಯನ ಮಾಡಿ ಯುಕೆಗೆ ತೆರಳಿದ್ದರು. ಐಪಿಎಲ್ ಆರಂಭದ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಇಂದು ಅದು ವಿಶ್ವ ಕ್ರೀಡೆಯಲ್ಲಿ ಒಂದು ದೊಡ್ಡ ಸಂಸ್ಥೆಯಾಗಲು ಕಾರಣರಾಗಿದ್ದರು.
2009ರಲ್ಲಿ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಹಿಸಬೇಕಾಯಿತು. 2010 ರ ಐಪಿಎಲ್ ಫೈನಲ್ ನಂತರ, ಪುಣೆ ಮತ್ತು ಕೊಚ್ಚಿ ಎಂಬ ಎರಡು ಹೊಸ ಫ್ರಾಂಚೈಸಿಗಳ ಬಿಡ್ಡಿಂಗ್ನಲ್ಲಿ ದುರುಪಯೋಗ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಲಲಿತ್ ಮೋದಿಯನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಯಿತು. ಲಲಿತ್ ಮೋದಿ ಅವರ ಮೇಲೆ ಆರ್ಥಿಕ ದುರುಪಯೋಗ ಮತ್ತು ಕಚೇರಿಯಿಂದ ಅನಧಿಕೃತ ಹಣ ವರ್ಗಾವಣೆ ಆರೋಪವಿದೆ.