ಬೆಂಗಳೂರು,ಸೆ.5– ದೇವನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕೆ ಉದ್ದೇಶಕ್ಕೆ ಮಾಡಲಾಗಿದ್ದ ಭೂ ಸ್ವಾಧೀನವನ್ನು ಕೈಬಿಟ್ಟು ಹಸಿರುವಲಯ (ಗ್ರೀನ್ ಬೆಲ್ಟ್ )ವಾಗಿ ಮುಂದುವರೆಸ ಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ವಿರೋಧ ಇರುವ ಒಂದು ಎಕರೆ ಜಮೀನನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಸ್ವ ಇಚ್ಛೆಯಿಂದ ಯಾರು ಕೃಷಿ ಜಮೀನು ನೀಡಲು ಮುಂದೆ ಬರುತ್ತಾರೆಯೋ ಅಂಥ ಜಮೀನನ್ನು ಪಡೆಯುತ್ತೇವೆ ಎಂದರು.
ವರ್ಷದ ನಂತರ ಭೂಮಿಯ ಬೆಲೆ ದುಬಾರಿಯಾಗಿದೆ. ಹೀಗಾಗಿ ಜಮೀನು ನೀಡಲು ನಿರಾಕರಿಸಿದವರ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುತ್ತೇವೆ ಎಂದು ಹೇಳಿದರು. ಕೃಷ್ಣ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನದ ಗೊಂದಲದ ವಿಚಾರ ಈಗ ಒಂದು ಹಂತಕ್ಕೆ ಬಂದಿದೆ.
75 ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಲಿದೆ. 75 ಸಾವಿರ ಎಕರೆ ಭೂಸ್ವಾಧೀನ ಆಗಬೇಕು. ಅದಕ್ಕೆ ಪರಿಹಾರ ನೀಡಬೇಕಾಗಿದೆ. ಪ್ರತಿ ಎಕರೆ 50 ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಇದೆ. ಒಟ್ಟಾರೆ 25 ಸಾವಿರ ಕೋಟಿ ರೂ. ಬೇಕಾಗಬಹುದು ಎಂದರು.
ನಾಲೆಗಳಿಗೆ 11 ಕೋಟಿ ಬೇಕಾಗುತ್ತದೆ. ಒಟ್ಟಾರೆ ಯೋಜನೆಗೆ 95 ಸಾವಿರ ರೂ. ವೆಚ್ಚವಾಗಬಹುದೆಂದು ಅಂದಾಜಿಸ ಲಾಗಿದೆ. ಪುನರ್ವಸತಿ ಯಲ್ಲೂ ಸಮಸ್ಯೆಯಿದೆ. ಸರ್ಕಾರ ಎಲ್ಲವನ್ನು ಸರಿ ಮಾಡಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಬಂಡವಾಳ ಹೂಡಿಕೆ: ರಾಜ್ಯ ನಂಬರ್ ಒನ್ ಪ್ರಸಕ್ತ ತ್ರೈಮಾಸಿಕದಲ್ಲಿ ಬಂಡವಾಳ ಹೂಡಿಕೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ 2ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಂದಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಅಮೆರಿಕಾದ ತೆರಿಗೆ ಹೆಚ್ಚಳದ ಪರಿಣಾಮ ಎಲೆಕ್ಟ್ರಾನಿಕ್ಸ್ ಮೇಲೆ ಬೀರುವುದಿಲ್ಲ. ನಾವು ಸೇವಾ ವಲಯದಲ್ಲೂ ಮುಂದಿದ್ದೇವೆ. ಪ್ರಧಾನಿ ನರೇಂದ್ರಮೋದಿ ಅವರು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಹೋಗಿದ್ದರು. ಆದರೆ ತೆರಿಗೆ ಏರಿಸಿ ನಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿಯವರು ಬೇರೆ ದೇಶಗಳಿಗೆ ರಾಜಕೀಯಕ್ಕಾಗಿ ಹೋಗಬಾರದಿತ್ತು ಎಂದರು.
ದೇಶದಲ್ಲಿ ಜಿಎಸ್‌ಟಿ ಅನುಷ್ಠಾನ ಸರಿಯಾಗಿ ಆಗಿಲ್ಲ. ಕಳೆದ 9 ವರ್ಷದಿಂದ ಜನರು ತೊಂದರೆ ಅನುಭವಿಸಿದ್ದಾರೆ. ಕಚ್ಚಾತೈಲ ಹಾಗೂ ಅನಿಲದ ಬೆಲೆ ಕೂಡ ಕಡಿಮೆಯಾಗಿದೆ. ಅದರ ಲಾಭ ಜನರಿಗೆ ಸಿಗಬೇಕಲ್ಲವೇ? ಎಂದು ಪ್ರಶ್ನಿಸಿದರು. ಕಚ್ಚಾತೈಲದ ದರ ಕಡಿತದ ಲಾಭ ಜನರಿಗೆ ಎಲ್ಲಿ ಕೊಟ್ಟಿದ್ದಾರೆ? ಎಂದು ಪಾಟೀಲ್ ಪ್ರಶ್ನಿಸಿದರು.