Friday, November 22, 2024
Homeರಾಜ್ಯಜಂಟಿ ಸರ್ವೆ ಬಳಿಕ ಹೆಚ್ಚುವರಿ ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರ : ಖಂಡ್ರೆ

ಜಂಟಿ ಸರ್ವೆ ಬಳಿಕ ಹೆಚ್ಚುವರಿ ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರ : ಖಂಡ್ರೆ

ಬೆಳಗಾವಿ,ಡಿ.14- ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಬಳಿಕ ಹೆಚ್ಚುವರಿ ಭೂಮಿ ಕಂಡುಬಂದರೆ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಧಾನಸಭೆಗೆ ತಿಳಿಸಿದರು. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಪ್ರಶ್ನೆ ಕೇಳಿ, ಅರಣ್ಯದ ಗಡಿಯಾಚೆಗೆ ಇರುವ ರೈತರ ಜಮೀನಿಗೆ ಸಾಗುವಳಿ ಚೀಟಿ ಪಡೆದುಕೊಳ್ಳಲು ಅರಣ್ಯ ಇಲಾಖೆಯ ನಿರಪಕ್ಷೇಣ ಪತ್ರ ಅಗತ್ಯವಿದೆ. ಆದರೆ ಇದು ಸುಲಭವಾಗಿ ದೊರೆಯದೆ ತೊಂದರೆಯಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಜಂಟಿ ಸಮೀಕ್ಷೆ ನಡೆಸಿದಾಗ 800 ಎಕರೆ ಅರಣ್ಯ ಪ್ರದೇಶವಿದ್ದು, ಹೆಚ್ಚುವರಿಯಾಗಿ 500 ಎಕರೆ ಭೂಮಿ ಪತ್ತೆಯಾಗಿದೆ.

ಹೀಗಾಗಿ ನಕ್ಷೆ ಇಲ್ಲದ ಜಮೀನುಗಳನ್ನು ಜಂಟಿ ಸರ್ವೆ ಮಾಡಿಸಿ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಚಿವ ಈಶ್ವರ್ ಖಂಡ್ರೆ, ಜಂಟಿ ಮೋಜಿಣಿಯನ್ನು ಶೀಘ್ರವಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು. ಅರಣ್ಯ ಇಲಾಖೆಯ ಸುತ್ತಳತೆಯಲ್ಲಿ ಹೆಚ್ಚುವರಿ ಭೂಮಿ ಕಂಡುಬಂದರೆ ಗಡಿಯನ್ನು ಗುರುತಿಸಿ ಉಳಿದ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುತ್ತೇವೆ.

ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ

ನಿರಪೇಕ್ಷಣಾ ಪತ್ರ ನೀಡಲು ಕೃಷಿ ಭೂಮಿಗಳು 100 ಮೀಟರ್ ಅಂತರದಲ್ಲಿರಬೇಕು ಮತ್ತು ಅರಣ್ಯ ಎಂದು ಪರಿಗಣಿಸಬಹುದಾದಷ್ಟು ಮರಗಳ ಸಂಖ್ಯೆ ಇರಬಾರದು. ಜೊತೆಗೆ ಕೇಂದ್ರ ಇಲಾಖೆಗೂ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು. ಈ ವೇಳೆ ಶೂಳ್ಯ ಕ್ಷೇತ್ರದ ಶಾಸಕರಾದ ಭಾಗಿರಥಿ ಮುರುಳ್ಯ ಅವರು ತಮ್ಮ ಕ್ಷೇತ್ರದಲ್ಲಿರುವ ರಬ್ಬರ್ ಕಾರ್ಮಿಕರಿಗೆ ಹೆಚ್ಚುವರಿ ಬೋನಸ್ ನೀಡಬೇಕು, ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈಗಾಗಲೇ ಶೇ.8.3ರಷ್ಟು ಬೋನಸ್ ನೀಡಲಾಗಿದೆ. ಕಾರ್ಮಿಕರು ಶೇ.20ರಷ್ಟು ಬೋನಸ್‍ಗಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆರ್ಥಿಕ ಸ್ಥಿತಿಗತಿಯಲ್ಲಿ ಅದು ಕಷ್ಟಸಾಧ್ಯ ಎಂದರಲ್ಲದೆ, ಆನೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES

Latest News