Friday, November 29, 2024
Homeರಾಷ್ಟ್ರೀಯ | Nationalಭಾರತಕ್ಕೆ ಎಲ್ಇಟಿ ಉಗ್ರನನ್ನ ಹಸ್ತಾಂತರಿಸಿದ ರುವಾಂಡಾ

ಭಾರತಕ್ಕೆ ಎಲ್ಇಟಿ ಉಗ್ರನನ್ನ ಹಸ್ತಾಂತರಿಸಿದ ರುವಾಂಡಾ

Lashkar Terrorist, accused of funding terrorism in India, extradited from Rwanda

ನವದೆಹಲಿ,ನ.29- ಭಯೋತ್ಪಾದಕ ಕೃತ್ಯ ಎಸಗಲು ಬೆಂಗಳೂರು ಜೈಲಿನಲ್ಲೇ ಸಂಚು ರೂಪಿಸಿದ್ದ, ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ್ದ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ರುವಾಂಡಾ ದೇಶ ಭಾರತಕ್ಕೆ ಹಸ್ತಾಂತರಿಸಿದ್ದು, ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ರುವಾಂಡಾ ತನಿಖಾ ಬ್ಯೂರೋ ಇಂಟರ್ಪೋಲ್ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಸಹಯೋಗದೊಂದಿಗೆ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಸಲಾನ್ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಹೊರಡಿಸಿದ ಜಾಮೀನುರಹಿತ ವಾರಂಟ್ ಹಾಗೂ ಇಂಟರ್ಪೋಲ್ ಹೊರಡಿಸಿದ್ದ ರೆಡ್ಕಾರ್ನರ್ ನೊಟೀಸ್ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆದಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್ಐಎ, ಬೆಂಗಳೂರು ಕಾರಾಗೃಹದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ಮತ್ತು ಇದಕ್ಕಾಗಿ ಯುವಕರ ನೇಮಕಾತಿ ನಡೆಸಿದ್ದ ಸಲಾನ್ನನ್ನು ಎನ್ಐಎಆರ್ಐಬಿ, ಇಂಟರ್ಪೋಲ್ ಮತ್ತು ಎನ್ಸಿಬಿ ಸಹಾಯದಿಂದ ವಶಕ್ಕೆ ಪಡೆಯಲಾಗಿದ್ದು, ಆತನನ್ನು ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿಸಿದೆ.

ರುವಾಂಡ ತನಿಖಾ ಸಂಸ್ಥೆ ಹೊರಡಿಸಿರುವ ಹೇಳಿಕೆಯಲ್ಲಿ, ಗಡಿಯಾಚೆಗಿನ ಅಪರಾಧಗಳ ವಿರುದ್ಧ ಹೋರಾಟದ ಅಂತಾರಾಷ್ಟ್ರೀಯ ಸಹಕಾರದ ಚೌಕಟ್ಟಿನಲ್ಲಿ ಭಾರತಕ್ಕೆ ಬೇಕಾಗಿದ್ದ ಸಲಾನ್ ಖಾನ್ ಆಲಿಯಾಸ್ ಸಲಾ (30)ಎಂಬಾತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಹಸ್ತಾಂತರದ ಮೂಲಕ ರುವಾಂಡಾ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದು ತಿಳಿಸಿದೆ.

ಯಾರೀತ ಸಲಾನ್?: ಸ್ಫೋಟ ಪ್ರಕರಣಕ್ಕೆ ನೆರವು ನೀಡಿದ ಹಿನ್ನೆಲೆಯಲ್ಲಿ ಈತನ ವಿರುದ್ಧ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಳಿಕ ಎನ್?ಐಎ ತನಿಖೆ ಕೈಗೊಂಡಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು ಈತ ಸಹಾಯ ಮಾಡಿದ್ದ ಎಂಬ ಗಂಭೀರ ಆರೋಪವಿದೆ.

ಭಯೋತ್ಪಾದಕ ಸಂಘಟನೆಗಳ ಜೊತೆಗೆ ಈತನ ನಂಟು ಬಹಿರಂಗವಾದ ಬಳಿಕ ದೇಶ ತೊರೆದು ಪರಾರಿಯಾಗಿದ್ದ. ಈತನ ಬಂಧನಕ್ಕೆ ಎನ್ಐಎ ಇಂಟರ್ಪೋಲ್ ಮೂಲಕ ಸಹಾಯ ಕೇಳಿತ್ತು ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದಲ್ಲಿ ಸಲಾನ್ ಆರೋಪಿಯಾಗಿದ್ದಾನೆ. ಈತ ಉಗ್ರರಿಗೆ ಸ್ಫೋಟಕಗಳನ್ನು ಪೂರೈಸುವ ಮೂಲಕ ದುಷ್ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ.

ಪೋಕ್ಸೋ ಕೃತ್ಯ ಎಸಗಿ ಸಲಾನ್ ಬೆಂಗಳೂರು ಜೈಲು ಸೇರಿದ್ದ. 2018 ಮತ್ತು 2022ರ ಜೈಲುವಾಸದ ಅವಧಿಯಲ್ಲಿ ಜೀವಾವಾಧಿ ಶಿಕ್ಷೆಗೆ ಒಳಗಾಗಿದ್ದ ಉಗ್ರ ನಾಸೀರ್ ಸಂಪರ್ಕಕ್ಕೆ ಈತ ಬಂದಿದ್ದ. ಈತನ ಮಾತಿಗೆ ಮರುಳಾಗಿ ಮೂಲಭೂತವಾದ ಕಡೆಗೆ ಆಕರ್ಷಿತನಾಗಿದ್ದ. ಅಷ್ಟೇ ಅಲ್ಲದೇ ಸಹ ಕೈದಿಗಳನ್ನು ಸೆಳೆದು ಅವರನ್ನು ಉಗ್ರರನ್ನಾಗಿ ರೂಪಿಸುತ್ತಿದ್ದ.

ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಉಗ್ರರ ಸಂಪರ್ಕ ಸಾಧಿಸಿ ಅವರಿಗೆ ಶಸಾ್ತ್ರಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆ ಮಾಡುವ ಮೂಲಕ ಸಹಕಾರ ನೀಡುತ್ತಿದ್ದ. ಭಯೋತ್ಪಾದನಾ ಕೃತ್ಯದಲ್ಲಿ ತನ್ನ ಹೆಸರು ಬೆಳಕಿಗೆ ಬರುತ್ತಿದ್ದಂತೆ ಸಲಾನ್ ಭಾರತದಿಂದ ಪರಾರಿಯಾಗಿದ್ದ.

ಕಳೆದ ವರ್ಷದ ಅಕ್ಟೋಬರ್ 25ರಂದು ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿಯಿಂದ ಎನ್ಐಎ ವಹಿಸಿಕೊಂಡಿತ್ತು. ಸಲಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಶಸಾ್ತ್ರಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.

ಈ ವರ್ಷ ಆಗಸ್ಟ್ 2ರಂದು ಎನ್ಐಎ ಕೋರಿಕೆಯ ಮೇರೆಗೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿತ್ತು. ಈ ನೋಟಿಸ್ ಹಿನ್ನೆಲೆಯಲ್ಲಿ ರುವಾಂಡಾದ ಅಧಿಕಾರಿಗಳು ಸಲಾನ್ನನ್ನು ಬಂಧಿಸಿ ಭಾರತೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. 2024 ರಲ್ಲಿ ಇಂಟರ್ಪೋಲ್ ಒಳಗೊಂಡಂತೆ ಸಂಘಟಿತ ಪ್ರಯತ್ನದ ಮೂಲಕ ದೇಶ ಬಿಟ್ಟು ಪರಾರಿಯಾಗಿದ್ದ 26 ಮಂದಿಯನ್ನು ಭಾರತಕ್ಕೆ ತನಿಖಾ ಸಂಸ್ಥೆಗಳು ಕರೆತಂದಿವೆ.

ಏನಿದು ಪ್ರಕರಣ?:
2023ರ ಜುಲೈನಲ್ಲಿ ಆರ್ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್ ಸಂಪರ್ಕ ಬೆಳೆಸಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು. ನಂತರ ಈ ಪ್ರಕರಣ ಎನ್ಐಎಗೆ ವರ್ಗಾವಣೆಯಾಗಿತ್ತು.

ಈ ವರ್ಷದ ಜನವರಿ 12 ರಂದು ಎನ್ಐಎ ಈ ಪ್ರಕರಣದ ಸಂಬಂಧ 8 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಚಾರ್ಜ್ಶೀಟ್ ಮಾಡಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಟಿ ನಾಸೀರ್ 2013 ರಿಂದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ಜುನೈದ್ ಅಹದ್ ಅಲಿಯಾಸ್ ಜೆಡಿ ಮತ್ತು ಸಲಾನ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದ ವಿಚಾರವನ್ನು ಎನ್ಐಎ ಉಲ್ಲೇಖಿಸಿತ್ತು.

RELATED ARTICLES

Latest News