ಶಿವಮೊಗ್ಗ,7-ಅಪರಾಧ ಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚುತಿದ್ದು, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಅವರು ರೌಡಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರವೇ ಇಲ್ಲವಾಗಿದೆ ಮತ್ತು ಅಲ್ಲಿ ಒಂದು ಕುಟುಂಬದ ಆಡಳಿತ ನಡೆಯುತ್ತಿದೆ. ಅಲ್ಲಿನ ಎಲ್ಲ ನೀಚ ಕೆಲಸಗಳೂ ಅವರ ಅಂಕೆಯಲ್ಲಿ ನಡೆಯುತ್ತಿವೆ ಎಂಬ ಅನುಮಾನ ಜನರಿಗೆ ಬಂದಿದೆ ಎಂದು ದೂರಿದ್ದಾರೆ.
ಭದ್ರಾವತಿಯಲ್ಲಿ ಎಲ್ಲಿ ಇಸ್ಪೀಟ್ ಆಡಬೇಕು, ಎಲ್ಲಿ ಕ್ಲಬ್ ಇರಬೇಕು ಎಂದು ನಿರ್ಧಾರ ಆಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಬಾರ್‌ಗಳ ಮುಂದೆ ಕೊಲೆಗಳಾಗುತ್ತಿವೆ. ವಿಶ್ವೇಶ್ವರಯ್ಯರ ಕನಸಿನ ಉಕ್ಕಿನ ನಗರಿ ಇಂದು ಇಸ್ಪೀಟ್ ಇತ್ಯಾದಿ ದುಷ್ಕೃತ್ಯಗಳ ಕೇಂದ್ರವಾಗುತ್ತಿದೆ ಎಂದು ಕ್ರಮ ಕೈಗೊಳ್ಳದ ದೋರಣೆಯನ್ನು ಟೀಕಿಸಿದರು.
ಬೆಂಗಳೂರು ಮೆಟ್ರೊ ರೈಲು ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಯಾವುದೇ ಸರ್ಕಾರವಾದರೂ ಬಸವಣ್ಣನವರ ತತ್ವ ಸಿದ್ದಾಂತದಂತೆ ಆಡಳಿತ ನಡೆಸಬೇಕು. ಆದರೆ, ನಮ ಮುಖ್ಯಮಂತ್ರಿ ಅವರು ಬರೀ ಭಾಷಣ ಮಾಡುತ್ತಾರೆಯೇ ವಿನಾ ಅದಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ಅವರು ಅಳವಡಿಸಿಕೊಂಡಿಲ್ಲ. ಹೀಗೆ ಮಾಡಿದ್ದರೆ ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.
ಧರ್ಮದ ವಿಚಾರದಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮತಗಳ್ಳತನ ಎಂದು ಕಾಂಗ್ರೆಸ್‌ನವರು ಹೇಳುತ್ತಿರುವುದು ಒಂದು ರಾಜಕಾರಣವಾಗಿದೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕಿದೆ. ಇಡೀ ದೇಶದಲ್ಲಿ ಈ ಪ್ರಕ್ರಿಯೆ ಆಗಲಿದೆ. ರಾಹುಲ್ ಗಾಂಧಿಯವರು ಬಿಹಾರದಲ್ಲಿ ನಡೆಸಿರುವ ಪಾದಯಾತ್ರೆ ಉಪಯೋಗಕ್ಕೆ ಬರುವುದಿಲ್ಲ ಫಲಿತಾಂಶ ಬಂದ ಮೇಲೆ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.