ಬೆಳಗಾವಿ,ಡಿ.18- ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರಿ ಆಸ್ಪತ್ರೆಗಳ ವಸ್ತುಸ್ಥಿತಿ ಹೇಳುತ್ತಿದ್ದಾರೆಯೇ ಹೊರತು ರಾಜಕಾರಣ ಬೆರೆಸಿಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಗೆ ತಿಳಿಸಿದರು.
ನಿಯಮ 69ರಡಿ ಅಶೋಕ್ ಅವರು ಸರ್ಕಾರಿ ಆಸ್ಪತ್ರೆಗಳ ಕುರಿತು ಮಾತನಾಡುತ್ತಿದ್ದಾಗ ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮಧ್ಯಪ್ರವೇಶಿಸಿ, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತಕವಾಗಿ ಮಾತನಾಡಿದರೆ ಜನರಲ್ಲಿ ಹೇಗೆ ನಂಬಿಕೆ ಬರುತ್ತದೆ? ವೈದ್ಯರ ಬಗ್ಗೆ ನಕಾರಾತಕ ಧೋರಣೆ ಸರಿಯಲ್ಲ. ಒಳ್ಳೆ ಸಲಹೆ ಕೊಡಿ ಎಂದರು.
ಆಗ ಬಿಜೆಪಿ ಶಾಸಕರು ಪ್ರತಿಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವರು, ಸರ್ಕಾರಿ ಆಸ್ಪತ್ರೆಗಳ ವಸ್ತುಸ್ಥಿತಿ ಹೇಳುತ್ತಿದ್ದಾರೆ. ಆಸ್ಪತ್ರೆಗಳ ಮೇಲೆ ದೂರು ಹೇಳಬಾರದೆಂದೇನೂ ಇಲ್ಲ. ಮೇಲನೆಯಲ್ಲಿ ಆರೋಗ್ಯ ಸಚಿವರು ಇದಕ್ಕಿಂತ ಖಾರವಾಗಿ ಮಾತನಾಡಿ, ಸರಿಪಡಿಸಲು ಸಲಹೆ ನೀಡಿ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಬೆರೆಸಬಾರದು. ತಾಳೆಯಿಂದ ಆಲಿಸಿ ಎಂದು ಸಲಹೆ ಮಾಡಿದರು.
ಅಶೋಕ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬಾಣಂತಿಯರು ಹೋಗಬಾರದವ್ವ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಶೇ.50ರಷ್ಟು ಬಾಣಂತಿಯರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ ಎಂದು ವರದಿಯಾಗಿದೆ. ಇದಕ್ಕೆ ಸಚಿವರು ಉತ್ತರ ಕೊಡುತ್ತಾರೆ ಇಲ್ಲವೇ ಕೋನರೆಡ್ಡಿಯವರೇ ಉತ್ತರ ಕೊಟ್ಟರೂ ಸ್ವೀಕರಿಸುತ್ತೇನೆ. ವಿರೋಧ ಪಕ್ಷ ಇರುವುದೇ ಟೀಕೆ-ಟಿಪ್ಪಣಿ ಮಾಡಲು ಎಂದು ತಿರುಗೇಟು ನೀಡಿದರು.