ಬೆಂಗಳೂರು,ಅ.20– ಖಾಸಗಿ ಚಾನೆಲ್‌ನ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿನ ಅವಘಡಗಳು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ಸಹಸ್ಪರ್ಧಿ ಜಗದೀಶ್ ಅವರ ವಿರುದ್ಧ ಬಲಪ್ರಯೋಗ ಮಾಡಿ ಮನೆಯಿಂದ ಹೊರಹಾಕಲ್ಪಟ್ಟ ರಂಜಿತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮೊಂದಿಗೆ ಹೊರಹಾಕಲ್ಪಟ್ಟ ಜಗದೀಶ್ ಅವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಪ್ರವೇಶ ನೀಡಲಾಗುತ್ತಿದೆ ಎಂಬ ವದಂತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಅವರು ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದರು. ಅದಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ. ಇದು ಹೀರೋಯಿಸಂ ಅಲ್ಲ, ಮಾನವೀಯತೆ. ನಾನು ಇರುವುದೇ ಹೀಗೆ. ಚಿಕ್ಕವಯಸ್ಸಿನಿಂದಲೂ ಹೆಣ್ಣು ಮಕ್ಕಳಿಗೆ ಅಪಮಾನವಾದಾಗ ನಾನು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೇನೆ. ಆರಂಭದಿಂದಲೂ ಮನೆಯಲ್ಲಿ ತಾಳೆಯಿಂದ ಇದ್ದೆ. ಆದರೆ ಜಗದೀಶ್ ಅವರ ಅವಹೇಳನ ಹೆಚ್ಚಾದಾಗ ಪ್ರತಿಕ್ರಿಯಿಸಬೇಕಾಯಿತು ಎಂದರು.
ಮನೆಯಲ್ಲಿ ಜಗದೀಶ್‌ಗಿಂತಲೂ ನಾನು ಒರಟಾಗಿ ಮತ್ತು ಅಸಭ್ಯವಾಗಿ ವರ್ತಿಸಲು ನನಗೂ ಅವಕಾಶವಿತ್ತು. ಆದರೆ ನಾನು ಉತ್ತಮವಾಗಿ ಆಟ ಆಡಿದ್ದೆ. ಈಗ ಕೆಟ್ಟದಾಗಿ ವರ್ತಿಸಿದ ವ್ಯಕ್ತಿಗೆ ಮರುಪ್ರವೇಶ ನೀಡಲಾಗುತ್ತಿದೆ. ನನಗೂ ಅವಕಾಶ ಕೊಟ್ಟು ನೋಡಿ. ರಂಜಿತ್ ಏನು ಎಂದು ತೋರಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.
ಜಗದೀಶ್ ತುಂಬಾ ಕೆಟ್ಟದಾಗಿ ಮಾತನಾಡಿದ್ದು, ನನ್ನಿಂದ ತಾಳೆಯಿಂದ ಇರಲು ಸಾಧ್ಯವಾಗಲಿಲ್ಲ. ಆತ ಸಿಂಹ ಅಲ್ಲ, ಇಲಿ ಎಂದು ಕಿಡಿ ಕಾರಿದ್ದು, ಜಗದೀಶ್ ಅವರ ಕ್ಷಮೆಯನ್ನು ಸ್ವೀಕಾರ ಮಾಡುತ್ತೇನೆ. ಆದರೆ ಅವರು ಮತ್ತೊಬ್ಬರ ಭವಿಷ್ಯವನ್ನು ಹಾಳು ಮಾಡಲು ಉದ್ದೇಶಪೂರಕವಾಗಿಯೇ ಆ ರೀತಿ ನಡೆದುಕೊಂಡರು ಎಂದಿದ್ದಾರೆ.
ಬಿಗ್‌ಬಾಸ್ ನಿರೂಪಣೆಯ ವೇಳೆ ಜಗದೀಶ್ ಅವರನ್ನು ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಲಾಗಿದೆ. ಅಲ್ಲೆಲ್ಲೂ ನಾನು ಕಾಣಿಸಲೇ ಇಲ್ಲ. ನನ್ನ ಬಿಗ್‌ಬಾಸ್ ಕನಸನ್ನು ನುಚ್ಚುನೂರು ಮಾಡಿದ್ದಾರೆ. ತಪ್ಪು ಮಾಡುವುದು, ಮತ್ತೆ ಕ್ಷಮೆ ಕೇಳುವುದು ಎಷ್ಟು ಸರಿ ಎಂದು ಜನರೇ ನಿರ್ಧರಿಸಬೇಕು ಎಂದು ಹೇಳಿದರು.