Monday, October 14, 2024
Homeರಾಜ್ಯಜನವರಿ ಬಳಿಕ ರಾಜಕೀಯ ಧ್ರುವೀಕರಣ: ಲಕ್ಷ್ಮಣ್ ಸವದಿ

ಜನವರಿ ಬಳಿಕ ರಾಜಕೀಯ ಧ್ರುವೀಕರಣ: ಲಕ್ಷ್ಮಣ್ ಸವದಿ

ಬಾಗಲಕೋಟೆ, ನ.20- ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಸಾಧನೆಗಾಗಿ ಅನ್ಯ ಪಕ್ಷಗಳಿಂದ ನಾಯಕರನ್ನು ಕರೆ ತರುವುದು ಸೇರಿದಂತೆ ರಾಜಕೀಯ ಧ್ರುವೀಕರಣಕ್ಕೆ ಜನವರಿ 26ರ ಬಳಿಕ ಚಾಲನೆ ನೀಡುವುದಾಗಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಅದು ಸ್ಪೋಟವಾಗುವುದು ಮಾತ್ರ ಬಾಕಿ ಇದೆ. ನನಗೆ ಆ ಪಕ್ಷದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಅಸಮಾಧಾನ ಯಾವಾಗ ಹೊರ ಬೀಳಲಿದೆಯೋ ಗೋತ್ತಿಲ್ಲ. ಜ್ವಾಲಾಮುಖಿ ಹೊರ ಬರುವುದಂತೂ ಖಚಿತ ಎಂದರು.

ಬಿಜೆಪಿಯಿಂದ ಬಹಳಷ್ಟು ನಾಯಕರು ಕಾಂಗ್ರೆಸ್‍ಗೆ ಬರುವ ಪ್ರಕ್ರಿಯೆ ಜನವರಿ 26ರ ನಂತರ ಸಕ್ರಿಯವಾಗಲಿದೆ. ಎಷ್ಟು ಜನ ಬರುತ್ತಾರೆ ಎಂದು ಕಾದು ನೋಡಿ. ಸದ್ಯಕ್ಕೆ ಯಾವುದೇ ಮುನ್ಸೂಚನೆ ನೀಡುವುದಿಲ್ಲ. ಜ.26ರ ಬಳಿಕ ನಮ್ಮ ಚಟುವಟಿಕೆಗಳನ್ನು ಆರಂಭಿಸುತ್ತೇವೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯವಾದ ಬ್ಲೂ ಪ್ರಿಂಟ್ ತಯಾರು ಮಾಡಿದ್ದೇವೆ ಎಂದು ಹೇಳಿದರು.

ತಮಗೆ ಲಿಂಗಾಯಿತ ಸಮುದಾಯದ ನಾಯಕರನ್ನಷ್ಟೇ ಅಲ್ಲ; ಎಲ್ಲಾ ಸಮುದಾಯದ ನಾಯಕರನ್ನು ಸೆಳೆಯುವ ಜಬಾಬ್ದಾರಿಯು ಇದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಬದ್ಧತೆ ಹೊಂದಿದೆ. ಬಿಜೆಪಿಯಲ್ಲಿ ಹಿಂದುತ್ವ, ಹಿಂದುತ್ವ ವಿರೋಧಿ ಎಂಬ ಭಾವನೆಗಳಿವೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ ಎಂದರು.

ಅನ್ಯ ಪಕ್ಷಗಳ ಬಹಳಷ್ಟು ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರನ್ನು ಇಲ್ಲಿಗೆ ಕರೆ ತಂದ ಮೇಲೆ ಅವರಿಗೆ ಸೂಕ್ತ ಮಾನ ನೀಡುವ ಬಗ್ಗೆಯೂ ಚಿಂತನೆ ಮಾಡಬೇಕಿದೆ. ಇಲ್ಲಿದ್ದವರಿಗೆ ಮನಸ್ಸಿಗೆ ನೋವು ಆಗಬಾರದು. ಹೊರಗಿನಿಂದ ಬಂದವರಿಗೆ ನೀಡಲು ಇಲ್ಲಿ ಸೂಕ್ತ ಸ್ಥಾನ ಮಾನ ಇರಬೇಕು. ಆ ನಿಟ್ಟಿನಲ್ಲಿ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಭಾರೀ ಚರ್ಚೆಗೆ ಗ್ರಾಸವಾದ `ಹಲೋ ಅಪ್ಪ’

ಬಿಜೆಪಿಯಿಂದ ಎಷ್ಟು ಜನ ಬರುತ್ತಾರೆ ಎಂಬುದಕ್ಕೆ ಮುಗುಮ್ಮಾಗಿ ಉತ್ತರ ನೀಡಿದ ಅವರು, ಗೋಳಿ ಹೊಡೆಯುವುದು ಅಂದರೆ ಬಂದೂಕು ಹಿಡಿಯುವಾಗ ಎರಡು ರೀತಿ ಇರುತ್ತದೆ. ಚರ್ರಿಗೋಳಿ ಚಿದ್ರವಾಗಿರುತ್ತದೆ. ಎಷ್ಟು ಮಂದಿಗೆ ಬಡಿಯುತ್ತದೆ ಎಂದು ಗೊತ್ತಿರುವುದಿಲ್ಲ. ಫೈರಿಂಗ್ ಮಾಡುವಾಗ ಎರಡು ರೀತಿ ಇರುತ್ತದೆ, ಯಾವ ಸಮಯಕ್ಕೆ ಯಾವುದನ್ನು ಫೈರಿಂಗ್ ಮಾಡಬೇಕೋ ಅದನ್ನು ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಬೇಕಾದರೆ ಫೈರಿಂಗ್ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ರಾಜಕೀಯದಲ್ಲಿ ದ್ರುವೀಕರಣ ಅನಿವಾರ್ಯ ಎಂದರು.

ನಾವು ಆಪರೇಷನ್ ಹಸ್ತ ಮಾಡುವುದಿಲ್ಲ. ಬಿಜೆಪಿಯಲ್ಲಿ ತಿರಸ್ಕಾರಕ್ಕೆ ಒಳಗಾಗಿ, ನಮಗೆ ಗೌರವ ನೀಡುತ್ತಿಲ್ಲ. ಅವಹೇಳನಕಾರಿಯಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನೋಂದು ನಮ್ಮ ಪಕ್ಷಕ್ಕೆ ಬರುವವರನ್ನು ಕರೆದುಕೊಂಡು ಗೌರವಯುತವಾಗಿ ನಡೆಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿಯಲ್ಲಿ ಪಕ್ಷದ ರಾಜಾಧ್ಯಕ್ಷ ಸ್ಥಾನ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಎರಡನ್ನು ಮಲೆನಾಡು ಮತ್ತು ಬೆಂಗಳೂರಿಗೆ ನೀಡಲಾಗಿದೆ. ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಅದರಲ್ಲೂ ಲಿಂಗಾಯಿತ ಸಮುದಾಯ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ. ದಾವಣೆಗೆರೆಯಿಂದ ಕಿತ್ತೂರು ಕರ್ನಾಟಕ ಭಾಗದವರೆಗೂ ಲಿಂಗಾಯಿತರು ಹೆಚ್ಚಿದ್ದಾರೆ. ಬಿಜೆಪಿಯಲ್ಲಿನ ಅಧಿಕಾರಗಳು ಬೆಂಗಳೂರು, ಶಿವಮೊಗ್ಗಕ್ಕೆ ಸೀಮಿತವಾಗಿವೆ. ಈಗ ನಡೆದಿರುವ ಆಯ್ಕೆ ಬಹಳಷ್ಟು ಮಂದಿಗೆ ಸಮಾಧಾನ ತಂದಿಲ್ಲ. ತಮಗಿಂತಲೂ ಕಿರಿಯರ ಕೈ ಕೆಳಗೆ ಹೇಗೆ ಕೆಲಸ ಮಾಡುವುದು ಎಂಬ ಹಿಂಜರಿಕೆ ಆ ಪಕ್ಷ ಬಹಳಷ್ಟು ನಾಯಕರಲ್ಲಿದೆ ಎಂದರು.

ತಾವು ಬಿಜೆಪಿ ಬಿಟ್ಟ ಬಂದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ. ಈಗ ನಾವು ಇರುವ ಪಕ್ಷದ ಬಗ್ಗೆ ಚರ್ಚೆ ಮಾಡುವುದು ಸೂಕ್ತ. ಪ್ರಶ್ನೆ ಎದುರಾದ ಕಾರಣಕ್ಕೆ ಉತ್ತರಿಸುವುದಾದರೆ ಇವತ್ತಿನ ಪರಿಸ್ಥಿತಿಯಲ್ಲಿ ವಿಜಯೇಂದ್ರ ಸೇರಿದಂತೆ ಯಾರೇ ಬಿಜೆಪಿ ಅಧ್ಯಕ್ಷರಾದರೂ ಆ ಪಕ್ಷ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ.

ಅಶೋಕ್ ಮತ್ತು ವಿಜಯೆಂದ್ರ ಜೋಡೆತ್ತುಗಳಂತೆ ಪಕ್ಷ ಕಟ್ಟುತ್ತೇವೆ ಎನ್ನುತ್ತಾರೆ. ಜೋಡೆತ್ತು ಅಷ್ಟೆ ಅಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ಎತ್ತುಗಳನ್ನು ಹೂಡಿ ನೇಗಿಲು ಹೂಳುವ ಪದ್ಧತಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಎತ್ತುಗಳನ್ನು ಹೂಡಿದರೂ ಹೊಲದಲ್ಲಿನ ಗಳೇ ಜಗ್ಗಲು ಆಗಲ್ಲ. ಆ ಶಕ್ತಿ ಬಿಜೆಪಿಗೆ ಇಲ್ಲ, ನೆಲ ಗಟ್ಟಿಯಾಗಿದೆ, ಬಿರುಸಾಗಿದೆ. ಅಲ್ಲಿ ಎರಡು ಎತ್ತುಗಳಿಗೆ ಜಗ್ಗುವ ಪರಿಸ್ಥಿತಿ ಉಳಿದಿಲ್ಲ. ಆ ನೇಗಿಲು ಜಗ್ಗ ಬೇಕಾದರೆ ಎಂಟತ್ತು ಎತ್ತುಗಳನ್ನು ಹೂಡಿದರೂ ಸಾಧ್ಯವಾಗುವುದಿಲ್ಲ ಎಂದರು.

ವಿಧಾನಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಅವರಿಗೆ ಬಿಜೆಪಿಯವರು ಗೌರವ ಸಲ್ಲಿಸುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಯನ್ನು ತಾವು ಕೂಡ ಒಪ್ಪಲ್ಲ. ಮಾತಿನ ಭರದಲ್ಲಿ ಜಮೀರ್ ಆ ರೀತಿ ಹೇಳಿರಬಹುದು. ಸ್ಥಾನಕ್ಕೆ ಗೌರವ ಇರುತ್ತದೆ. ಅದು ವ್ಯಕ್ತಿಗೆ ಸೀಮಿತವಲ್ಲ. ಸಂವಿಧಾನ ಬದ್ಧವಾದ ಹುದ್ದೆ ಒಂದು ಸಮಾಜಕ್ಕೆ ಸೇರಿದ್ದಲ್ಲ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಸ್ಪೀಕರ್ ಹುದ್ದೆಗೆ ಗೌರವ ನೀಡುತ್ತಾರೆ. ವ್ಯಕ್ತಿ ಸ್ಥಾನದಿಂದ ಕೆಳಗಿಳಿದ ಮೇಲೆ ಅವರ ಕುರಿತ ಗೌರವ ಬದಲಾಗುತ್ತದೆ ಎಂದರು.

ಮಾಜಿ ಶಾಸಕ ಯತೀಂದ್ರ ವಿಡಿಯೋ ಕುರಿತು ಟೀಕೆ ಮಾಡುವವರನ್ನು ನೋಡಿದರೆ ನನಗೆ ನಗು ಬರುತ್ತದೆ. ಮಾತನಾಡುವವರೆಲ್ಲಾ ಸತ್ಯ ಹರಿಶ್ಚಂದ್ರ ರಾಜರ ಮನೆಯಲ್ಲಿ ಬಾಡಿಗೆ ಇದ್ದಂತೆ ಮಾತನಾಡುತ್ತಾರೆ. ಬೇರೆಯವರಿಗೆ ಗೊತ್ತಿಲ್ಲದೆ ಇರಬಹುದು, ನಾನು ಇಪ್ಪತ್ತು ವರ್ಷ ಅವರ ಜೊತೆ ಇದ್ದು ನೋಡಿದ್ದೇನೆ. ಬಹಳ ಚೆನ್ನಾಗಿ ಗೊತ್ತಿದೆ. ಆರೋಪ ಮಾಡಲಿ, ಆದರೆ ಒಂದು ಬೆರಳನ್ನು ಬೇರೆಯವರತ್ತ ತೋರಿಸುವ ಮುನ್ನಾ ನಾಲ್ಕು ಬೆರಳು ತಮ್ಮತ್ತ ಇರುತ್ತವೆ ಎಂಬ ಅರಿವಿರಬೇಕು ಎಂದರು.

ಸ್ವಲ್ಪ ದಿನ ಕಳೆದ ಮೇಲೆ ಜನ ಸರ್ಕಾರ ನಡೆಸುವವರನ್ನು ಕಲ್ಲು ತೆಗೆದುಕೊಂಡು ಹೊಡೆಯುತ್ತಾರೆ ಎಂದು ಮಾಜಿ ಸಚಿವ ಶ್ರೀರಾಮಲು ನೀಡಿರುವ ವಿವಾದಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಶ್ರೀರಾಮುಲುರಿಗೆ ಸಮಯ ಪ್ರಜ್ಞೆ ಬಹಳ ಕಡಿಮೆ ಇದೆ. ಅವರು ಬಳ್ಳಾರಿ ಜಿಲ್ಲೆಯನ್ನೂ ಈಗಾಗಲೇ ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ, ಯಾರದರೂ ಪ್ರಭುದ್ಧ ರಾಜಕಾರಣಿ ಮಾತನಾಡಿದರೆ ಪ್ರತಿಕ್ರಿಯಿಸುತ್ತೇನೆ ಎಂದರು.

ನನ್ನ ಕ್ಷೇತ್ರದಲ್ಲಿ ಗಂಭೀರ ಸಮಸ್ಯೆಗಳಿವೆ, ನೀರಾವರಿ ಸೇರಿದಂತೆ ಅನೇಕ ಯೋಜನೆಗಳು ನಡೆಯಬೇಕಿದೆ. ಮಂತ್ರಿಯಾದ ಮೇಲೆ ರಾಜ್ಯ ಸುತ್ತ ಬೇಕಿದೆ. ಕ್ಷೇತ್ರ ಸಮಸ್ಯೆಗಳತ್ತ ಗಮನ ಹರಿಸಲು ಕಷ್ಟವಾಗುತ್ತದೆ. ಕಳೆದ ನಾಲ್ಕೈದು ವರ್ಷದಿಂದ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಮೊದಲು ಅವುಗಳನ್ನು ಸರಿ ಪಡಿಸಿ, ಬಳಿಕ ಸಚಿವ ಸ್ಥಾನದ ಬಗ್ಗೆ ಗಮನ ಹರಿಸುತ್ತೇನೆ ಎಂದರು.

RELATED ARTICLES

Latest News