ಬೆಂಗಳೂರು, ಅ.26- ಝಣ-ಝಣಾ ಕಾಂಚಾಣದ ಕಾಂಗ್ರೆಸ್ ಸರ್ಕಾರದಲ್ಲಿ ರಸ್ತೆ ಗುಂಡಿ ಮುಚ್ಚುವ ಹಣವೂ ಮಾಯ ನಾಳೆ ರಸ್ತೆಯೂ ಮಾಯ ಎಲ್ಲಾ ಮಾಯಾ ನಾಳೆ ನಾವೂ ಮಾಯ ಎಂದು ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತು ತಮ÷್ಮ ಸಾಮಾಜಿಕ ಜಾಲ ತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರೇ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್ಗೆ ತಲಾ 15 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದರಲ್ಲ, ಆ ಹಣವೆಲ್ಲಾ ಏನಾಯ್ತು? ಎಂದು ಪ್ರಶ್ನೆಸಿದ್ದಾರೆ.
ಬೆಂಗಳೂರಿನ ಉದ್ದಗಲಕ್ಕೂ ಬಾಯ್ತೆರಿದಿರುವ ಯಾಮಸ್ವರೂಪಿ ರಸ್ತೆ ಗುಂಡಿಗಳನ್ನು ನೋಡಿದರೆ ಬಹುಶಃ ಆ ದುಡ್ಡೆಲ್ಲವೂ ತಮ್ಮ ಕಮಿಷನ್ ಪಾಲಾದಂತಿದೆ. ಅಥವಾ ಈಗ ಚನ್ನಪಟ್ಟಣ ಚುನಾವಣೆ ಖರ್ಚಿಗೆ ಆ ಹಣ ಸಾಗಿಸಿದ್ದೀರೋ?. ಬ್ರ‍್ಯಾಂಡ್ ಬೆಂಗಳೂರು ಕಟ್ಟುವುದು ದೂರದ ಮಾತು ಸ್ವಾಮಿ, ಮೊದಲು ರಸ್ತೆ ಗುಂಡಿ ಮುಚ್ಚಿಸಿ ಜನರ ಪ್ರಾಣ ಉಳಿಸಿ ಎಂದು ಟೀಕೆಗಳ ಸುರಿಮಳೆಗೈದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಆಶೋಕ್ ಅವರು, ನಾಡಿನ ಕಲೆ, ಸಂಸ್ಕೃತಿ, ಕಲಾವಿದರು ಅಂದರೆ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ತಾತ್ಸಾರ.. ? ವಿಶ್ವ ವಿಖ್ಯಾತ ಸರೋದ್ ವಾದಕ ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರು ವಿಧಿವಶರಾಗಿ ಐದು ತಿಂಗಳು ಕಳೆದರೂ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚದ ಕಡತವನ್ನ ವಿಲೇವಾರಿ ಮಾಡದೆ ಇನ್ನೂ ಬಾಕಿ ಉಳಿಸಿಕೊಂಡಿದೆ ಈ ಲಜ್ಜೆಗೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಹೆಚ್.ಸಿಮಹಾದೇವಪ್ಪ ನವರೇ, ಪಂಡಿತ್ ತಾರಾನಾಥ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಒಪ್ಪಿದೆ ಎಂದು ಆಗ ಘೋಷಣೆ ಮಾಡಿದ್ದರಲ್ಲ, ನುಡಿದಂತೆ ನಡೆಯುವ ನಿಮ್ಮ ಮುಖ್ಯಮಂತ್ರಿಗಳ ಬದ್ಧತೆ ಬರೀ ಘೋಷಣೆಗೆ ಮಾತ್ರ ಸೀಮಿತಾನಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಂಡಿತ್ ತಾರಾನಾಥ್ ಅವರು ಕಳೆದ ದಸರಾ ವೇಳೆ ಸರ್ಕಾರದ ಭ್ರಷ್ಟಾಚಾರ, ಕಮಿಷನ್ ಕಾಂಡವನ್ನ ಬಯಲು ಮಾಡಿದ್ದರು ಎಂದು ಅವರ ಕುಟುಂಬದ ವಿರುದ್ಧ ಈಗ ಸೇಡು ತೀರಿಸಿಕೊಳ್ಳುತ್ತಿದ್ದೀರಾ? ಎಂದು ಹರಿಹಾಯ್ದಿದ್ದಾರೆ.
ನಾಡಿನ ಕಲಾವಿದರ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದಿದ್ದರೆ, ಅವರ ಚಿಕಿತ್ಸಾ ವೆಚ್ಚವನ್ನು ಅವರು ಕೇಳುವ ಮುನ್ನವೆ ತಾವೇ ಖುದ್ದಾಗಿ ಹೋಗಿ ಕೊಟ್ಟು ಬರಬೇಕಿತ್ತು. ಆದರೆ ಅವರ ಕಡತ ನಾಲ್ಕು ತಿಂಗಳಿಂದ ವಿಲೇವಾರಿ ಮಾಡದೆ ಕುಟುಂಬಸ್ಥರಿಗೆ ಅವಮಾನ ಮಾಡುತ್ತಿದ್ದೀರಲ್ಲ, ಇದೇನಾ ಕನ್ನಡ ನಾಡು, ನುಡಿ,ಸಂಸ್ಕೃತಿಗೆ ಕಾಂಗ್ರೆಸ್ ಸರ್ಕಾರ ನೀಡುವ ಗೌರವ? ಎಂದು ಅಶೋಕ್ ಟೀಕಿಸಿದ್ದಾರೆ.