ಬೆಂಗಳೂರು,ಅ.3- ನೈತಿಕತೆಯ ಪಾಠ ಮಾಡಿದ ಬಿಜೆಪಿಯ ನಾಯಕರು ಮೊದಲು ತಮ ತಪ್ಪುಗಳಿಗಾಗಿ ರಾಜೀನಾಮೆ ನೀಡಲಿ. ನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ವಿರೋಧಪಕ್ಷದ ನಾಯಕ ಆರ್.ಅಶೋಕ್‌ರವರ ಭೂಹಗರಣದ ಬಗ್ಗೆ ನಿನ್ನೆ ದಾಖಲಾತಿ ಕೇಳಿದ ಹಗರಣವನ್ನು ಬಯಲು ಮಾಡಿದ್ದೇವೆ. ಈವರೆಗೂ ನೈತಿಕತೆಯ ಪಾಠ ಮಾಡುತ್ತಿದ್ದ ಆರ್.ಅಶೋಕ್ ಮೊದಲು ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ನಂತರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ಕೊಡಬೇಕಾಗುತ್ತದೆ. ಆಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರದಿ ಬರುತ್ತದೆ. ಹೀಗೆ ಬಿಜೆಪಿಯಲ್ಲಿ ರಾಜೀನಾಮೆಯ ಸರಣಿ ಮುಂದುವರೆದರೆ ನಂತರ ಕೆ.ಎಸ್.ಈಶ್ವರಪ್ಪ ಹೇಳಿದಂತೆ ಬಿಜೆಪಿ ಸ್ವಚ್ಛವಾಗಲಿದೆ ಎಂದು ಹೇಳಿದರು.
ಜಾರಿ ನಿರ್ದೇಶನಾಲಯವೇ ನೀಡಿರುವ ಅಂಕಿ ಅಂಶಗಳನ್ನು ನೋಡಿದರೆ ಅದು ಎಷ್ಟು ದುರುಪಯೋಗವಾಗುತ್ತಿದೆ ಎಂದು ಸ್ಪಷ್ಟವಾಗುತ್ತದೆ. 5,297 ಪ್ರಕರಣಗಳು ದಾಖಲಾಗಿದ್ದು, ಶಿಕ್ಷೆಯಾಗಿರುವುದು ಕೇವಲ 40 ಕ್ಕೆ ಮಾತ್ರ. 4 ಪ್ರಕರಣಗಳು ಸಕ್ರಿಯವಾಗಿವೆ. ಮನಿಲ್ಯಾಂಡ್ರಿಂಗ್ ಕಾಯ್ದೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಕೇಂದ್ರ ಗೃಹಸಚಿವ ಅಮಿತ್ ಷಾ ನೀಡಿರುವ ಮಾಹಿತಿಯೇ ಇದನ್ನು ಸ್ಪಷ್ಟಪಡಿಸಿದೆ ಎಂದರು.
ಕರ್ನಾಟಕದಲ್ಲೂ ಸಿಬಿಐ, ಐಟಿ, ಇಡಿ ಗಳನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ. ರಾಜಭವನವನ್ನು ಸ್ವಂತ ಕಚೇರಿಯ ಹಾಗೆ ಬಿಜೆಪಿಯವರು ಬಳಸುತ್ತಿದ್ದಾರೆ. ನನ್ನನ್ನೂ ಸೇರಿದಂತೆ ಕಾಂಗ್ರೆಸಿಗರ ಪ್ರಕರಣಗಳು ಬಂದಾಗ 24 ಗಂಟೆಯಲ್ಲಿ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಬಿಜೆಪಿಯ ವಿರುದ್ಧ ದೂರು ನೀಡಿದರೆ ಅದು ರಾಜಭವನದಲ್ಲೇ ಉಳಿದುಹೋಗುತ್ತದೆ ಎಂದು ಆಕ್ಷೇಪಿಸಿದರು.
ಸಾವರ್ಕರ್, ಮಹಾತಗಾಂಧೀಜಿ ಹಾಗೂ ನಾಥೂರಾಮ್ ಗೂಡ್ಸೆ ಕುರಿತಂತೆ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಬಿಜೆಪಿಯವರು ವಾಟ್‌್ಸಆ್ಯಪ್ ಯೂನಿವರ್ಸಿಟಿಯಲ್ಲಿ ಓದಿಕೊಂಡು ಬಂದಿದ್ದಾರೆ. ನೈಜ ಇತಿಹಾಸ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ತೆಗೆದುಕೊಂಡಿದ್ದು ಸುಳ್ಳೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ಇತಿಹಾಸವನ್ನು ತಿಳಿದುಕೊಂಡು ಚರ್ಚೆಗೆ ಬರಲಿ. ನಾನು ಮತ್ತು ದಿನೇಶ್‌ಗುಂಡೂರಾವ್ ಈ ವಿಚಾರವಾಗಿ ಮಾತನಾಡಲು ಸಿದ್ಧರಿದ್ದೇವೆ ಎಂದರು.