Friday, October 18, 2024
Homeರಾಷ್ಟ್ರೀಯ | Nationalಒಡೆದ ಕನ್ನಡಿಯಂತಾದ ಇಂಡಿ ಕೂಟ : ಕಾಂಗ್ರೆಸ್ ಧೋರಣೆ ವಿರುದ್ಧ ಮೈತ್ರಿಪಕ್ಷಗಳ ಆಕ್ರೋಶ

ಒಡೆದ ಕನ್ನಡಿಯಂತಾದ ಇಂಡಿ ಕೂಟ : ಕಾಂಗ್ರೆಸ್ ಧೋರಣೆ ವಿರುದ್ಧ ಮೈತ್ರಿಪಕ್ಷಗಳ ಆಕ್ರೋಶ

Leaders of INDIA bloc

ನವದೆಹಲಿ,ಅ.15- ವಿರೋಧ ಪಕ್ಷಗಳು ಒಗ್ಗೂಡದಿದ್ದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲವೆಂದು ರೂಪುಗೊಂಡ ಇಂಡಿಯಾ ಮೈತ್ರಿಕೂಟದಲ್ಲಿ ಇದೀಗ ವಿಘಟನೆಯ ಭೀತಿ ಎದುರಾಗಿದೆ.

ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಎಎಪಿ ಮತ್ತು ಸಮಾಜವಾದಿ ಪಕ್ಷಗಳ ನಡುವಿನ ಬಿರುಕು ಹರ್ಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೀವ್ರವಾಗಿ ಮುನ್ನೆಲೆಗೆ ಬಂದಿತ್ತು. ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಅದು ಎಎಪಿಗೆ ಸ್ಥಾನಗಳನ್ನು ಬಿಟ್ಟುಕೊಡದೇ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಆದರೆ ಪಕ್ಷ ಆಡಳಿತ ವಿರೋಧಿ ಅಲೆಯನ್ನು ಮೀರಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿತ್ತು.

ಇಂಡಿಯಾ ಮೈತ್ರಿಕೂಟದಲ್ಲಿ ನಿರ್ಣಾಯಕ ಸೀಟು ಹಂಚಿಕೆ ಮಾತುಕತೆಗಳ ಸಮಯದಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಪಾಲುದಾರರಾದ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಅಲ್ಲಿಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸೀಟು ಹಂಚಿಕೆಗೆ ಕಾಂಗ್ರೆಸ್‌ನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದೆ ಎಂದು ಹೇಳಲಾಗುತ್ತಿದೆ.

ಅದೇ ರೀತಿ ಎಒಒ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆಗಳು ಜಾರ್ಖಂಡ್‌ನಲ್ಲಿ ಕಷ್ಟಕರವಾಗಬಹುದು. ಈ ನಿರ್ಣಾಯಕ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಪಾಲುದಾರರೊಂದಿಗೆ ಬೇರ್ಪಡುವ ಮಾರ್ಗಗಳನ್ನು ಪರಿಗಣಿಸಬಹುದು ಎಂಬ ಮುನ್ಸೂಚನೆಗಳಿವೆ.ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಗಣನೀಯ ಸ್ಥಾನಗಳನ್ನು ಗಳಿಕೆ ಮಾಡಿಕೊಂಡಿರುವುದು ಅಷ್ಟು ಸುಲಭಕ್ಕೆ ಮಿತ್ರ ಪಕ್ಷಗಳ ಬೇಡಿಕೆಗೆ ಒಪ್ಪದಿರುವ ಸಾಧ್ಯತೆಗಳಿವೆ.

ಏಕಾಂಗಿ ಸ್ಪರ್ಧೆಗೆ ಎಸ್‌ಪಿ ನಿರ್ಧಾರ:
ಎಎಪಿ ಮತ್ತು ಸಮಾಜವಾದಿ ಪಕ್ಷಕ್ಕೆ ಒಂದೇ ಒಂದು ಸ್ಥಾನವನ್ನು ನೀಡಲು ನಿರಾಕರಿಸಿದ ಕಾಂಗ್ರೆಸ್ ಹರಿಯಾಣದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿತ್ತು. ಇದು ಮಿತ್ರಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಎಎಪಿ ನಾಯಕರು ಹರಿಯಾಣದಲ್ಲಿ ಕಾಂಗ್ರೆಸ್‌ನ ಚುನಾವಣಾ ಸೋಲಿಗೆ ಸೊಕ್ಕಿನ ವರ್ತನೆ ಮತ್ತು ಮೈತ್ರಿಯ ಸಮಗ್ರತೆಯನ್ನು ಹಾಳುಮಾಡಿದೆ ಎಂದು ಆಕ್ರೋಶ ಹೊರಹಾಕಿದೆ.

ಕಾಂಗ್ರೆಸ್‌ನ ಹಠಮಾರಿತನವು ಇಂಡಿಯಾ ಒಕ್ಕೂಟದ ವಿಭಜನೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ವಿರೋಧ ಪಕ್ಷಗಳು ತಮ್ಮ ಹಾಗೂ ಎಲ್ಲರ ಎದುರಾಳಿ ಬಿಜೆಪಿ ವಿರುದ್ಧ ಒಂದಾಗುವ ಬದಲು ಸಾರ್ವಜನಿಕವಾಗಿ ಘರ್ಷಣೆ ಮಾಡುವ ನಿದರ್ಶನಗಳು ಹೆಚ್ಚಾಗುತ್ತಿವೆ. ಇದು ಎದುರಾಳಿಗೆ ವರವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಉದಾಹರಣೆಗೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ಮುಂಬರುವ ಉಪಚುನಾವಣೆಗೆ ಆರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಮುಂದಿನ ತಿಂಗಳು ಉಪಚುನಾವಣೆ ನಡೆಯಬಹುದಾದ ಹತ್ತು ವಿಧಾನಸಭಾ ಕ್ಷೇತ್ರಗಳಿಗೆ ಸೀಟು ಹಂಚಿಕೆಗೆ ಕಾಂಗ್ರೆಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹಿಂಜರಿಯುತ್ತಿದೆ ಎಂದು ಹೇಳಲಾಗಿದೆ.

ಜೆಡಿಯು ಇಂಡಿಯಾ ಒಕ್ಕೂಟ ತೊರೆದಿದ್ದೇಕೆ?:
ಪ್ರತಿಪಕ್ಷಗಳ ಮೈತ್ರಿಯ ಆರಂಭದ ದಿನಗಳಲ್ಲಿ ಸಹ ಅಷ್ಟೊಂದು ಸುಗಮವಾಗಿರಲಿಲ್ಲ. ಬಣ ರಚನೆಗೆ ಪ್ರಯತ್ನ ಆರಂಭಿಸಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್, ಕಾಂಗ್ರೆಸ್ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಲ್ಲಿಂದ ಹೊರ ಬಂದಿದ್ದರು. ಕಾಂಗ್ರೆಸ್‌ನ ಬೇಜವಾಬ್ದಾರಿ ಮತ್ತು ಹಠಮಾರಿ ಧೋರಣೆಯಿಂದಾಗಿ ಇಂಡಿಯಾ ಮೈತ್ರಿ ಮುರಿದು ಬೀಳುವ ಹಂತದಲ್ಲಿದೆ ಎಂದು ತ್ಯಾಗಿ ಹೇಳಿದ್ದರು.

ಹರಿಯಾಣದಲ್ಲಿನ ಇತ್ತೀಚಿನ ಚುನಾವಣಾ -ಫಲಿತಾಂಶವು ಇಂಡಿಯಾ ಒಕ್ಕೂಟಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಕಾಂಗ್ರೆಸ್ ಸೋಲು, ಅವರದ್ದೇ ಮಿತ್ರ ಪಕ್ಷಗಳಿಂದ ಭಾರಿ ಟೀಕೆಗೆ ಒಳಗಾಗುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗೆದ್ದಿದೆ. ಈ ಫಲಿತಾಂಶಗಳ ನಂತರ, ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಮಿತ್ರಪಕ್ಷಗಳ ಅಗತ್ಯವಿದೆ ಎಂಬುದನ್ನು ಫಲಿತಾಂಶಗಳು ತೋರಿಸಿಕೊಟ್ಟಿವೆ. ಅಷ್ಟೇ ಅಲ್ಲ ಈ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬುದನ್ನು ತೋರಿಸಿವೆ ಎನ್ನುತ್ತಿದ್ದಾರೆ ವಿಶ್ಲೇಷಕರು.

ನಿಸ್ಸಂದೇಹವಾಗಿ ಇದು ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಜೊತೆ ಚುನಾವಣಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಎಎಪಿ ಈಗಾಗಲೇ ಘೋಷಿಸಿದೆ.

RELATED ARTICLES

Latest News