ಬೆಂಗಳೂರು : ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದ ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರು ಜಾತಿಗಣತಿ ವಿಚಾರದಲ್ಲಿ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದ ನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಇಂದು ನಡೆದ ಜಾತಿಗಣತಿ ಸಮಾಲೋಚನಾ ಸಭೆಯಲ್ಲಿ ಪಕ್ಷಬೇಧ ಮರೆತು ರಾಜಕೀಯ ಪಕ್ಷಗಳ ಮುಖಂಡರು ಒಗ್ಗೂಡಿದ್ದು ವಿಶೇಷವಾಗಿತ್ತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ನಾಯಕರುಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿದ್ದು ಕಂಡುಬಂದಿತು.
ರಾಜಕೀಯವಾಗಿ ಭಿನ್ನಾಭಿಪ್ರಾಯ, ಸಿದ್ಧಾಂತ ಏನೇ ಇದ್ದರೂ ಜನಾಂಗದ ವಿಚಾರದಲ್ಲಿ ಒಗ್ಗಟ್ಟಿನ ಸಂದೇಶವನ್ನು ಇಂದು ರವಾನಿಸಿದರು.ಪರಸ್ಪರ ರಾಜಕೀಯವಾಗಿ ಬದ್ಧ ದ್ವೇಷಿಗಳಂತೆ ಬಿಂಬಿಸಿಕೊಂಡಿದ್ದ ಕುಮಾರಸ್ವಾಮಿಯವರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಬಲಭಾಗದಲ್ಲಿ ಹಾಗೂ ಡಿ.ಕೆ.ಶಿವಕುಮಾರ್‌ಯವರ ಎಡಭಾಗದಲ್ಲಿ ವೇದಿಕೆ ಹಂಚಿಕೊಂಡಿದ್ದರು.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಇಬ್ಬರೂ ನಾಯಕರು ಜೋಡೆತ್ತುಗಳಂತೆ ಜೊತೆಯಾಗಿದ್ದರು.ಆನಂತರ ರಾಜಕೀಯದಲ್ಲಾದ ಬದಲಾವಣೆಯಿಂದ ಪರಸ್ಪರ ಇಬ್ಬರೂ ನಾಯಕರು ದೂರವಾಗಿ ಆರೋಪ-ಪ್ರತ್ಯಾರೋಪವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.
ಜಾತಿಗಣತಿ ಪ್ರಮುಖವಾಗಿರುವುದರಿಂದ ಜನಾಂಗಕ್ಕೆ ಅನ್ಯಾಯವಾಗಬಾರದು. ಜನಾಂಗ ಒಗ್ಗಟ್ಟಿನಿಂದ ಇರಬೇಕು. ಒಡಕು ಉಂಟಾಗಬಾರದು ಎಂಬ ಕಾರಣಕ್ಕೆ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಒಗ್ಗೂಡಿದ್ದರು. ಇವರಲ್ಲದೆ ಜನಾಂಗವನ್ನು ಪ್ರತಿನಿಧಿಸುವ ಸಂಸದರು, ಶಾಸಕರು, ಮಾಜಿ ಶಾಸಕರು, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಜನಾಂಗದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದು ಮತ್ತಷ್ಟು ಒಗ್ಗೂಡುವಿಕೆಗೆ ಇಂಬು ನೀಡುವಂತಾಗಿತ್ತು.