Saturday, April 19, 2025
Homeರಾಜ್ಯರಾಜಕೀಯ ಬದಿಗಿಟ್ಟು ಕುಟುಂಬ ಸಮೇತ ಮತ್ತೆ ವಿದೇಶಕ್ಕೆ ತೆರಳಿದ ಡಿಸಿಎಂ ಡಿಕೆಶಿ

ರಾಜಕೀಯ ಬದಿಗಿಟ್ಟು ಕುಟುಂಬ ಸಮೇತ ಮತ್ತೆ ವಿದೇಶಕ್ಕೆ ತೆರಳಿದ ಡಿಸಿಎಂ ಡಿಕೆಶಿ

Leaving politics aside, DCM DK Shivakumar went abroad again with his family

ಬೆಂಗಳೂರು,ಫೆ.21- ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಜಂಜಾಟಗಳಿಗೆ ತಲೆ ಕೆಡಿಸಿಕೊಳ್ಳದೆ ಕುಟುಂಬ ಸಮೇತರಾಗಿ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ನಗರದಲ್ಲಿ ಕೆಪಿಸಿಸಿ ಬದಲಾವಣೆ, ಮುಖ್ಯಮಂತ್ರಿ ಸ್ಥಾನ ಸೇರಿದಂತೆ ನಾನಾ ರೀತಿಯ ಕಾವೇರಿದ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ. ಕೆಲವು ಸಚಿವರು ದೆಹಲಿಗೆ ದಂಡಯಾತ್ರೆ ನಡೆಸಿ ಬರಿಗೈಲಿ ವಾಪಸ್ ಬಂದಿದ್ದಾರೆ. ಪರಿಸ್ಥಿತಿ ರಾಜಕೀಯವಾಗಿ ಕಾವೇರಿದಂತಿದೆ.

ಆದರೆ ಡಿ.ಕೆ.ಶಿವಕುಮಾರ್ ಮಾತ್ರ ಮೊದಲಿನಿಂದಲೂ ಕೂಲಾಗಿದ್ದು, ಈಗ ಅಷ್ಟೇ ಕೂಲಾಗಿ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಕುಟುಂಬ ಸಮೇತರಾಗಿ ದುಬೈಗೆ ತೆರಳಿರುವ ಅವರು ನಾಲ್ಕು ದಿನ ಮೋಜಿನ ಪ್ರವಾಸ ನಡೆಸಲಿದ್ದಾರೆ. ಜೊತೆಗೆ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಕುಟುಂಬ ಸಮೇತರಾಗಿ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ಕುಂಭಮೇಳಕ್ಕೆ ತೆರಳಿದ್ದರು. 10 ದಿನಗಳ ನಂತರ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಎಂದಿಗಿಂತಲೂ ಈ ಬಾರಿ ಬಿಸಿಬಿಸಿ ಚರ್ಚೆಗಳಾಗುವ ಸಾಧ್ಯತೆ ಇವೆ.

ವಿರೋಧಪಕ್ಷಗಳಾದ ಬಿಜೆಪಿ, ಜೆಡಿಎಸ್ ಸಭೆಗಳ ಮೇಲೆ ಸಭೆ ನಡೆಸಿ ಚರ್ಚಿಸಬೇಕಾದ ವಿಷಯಗಳು, ಸರ್ಕಾರದ ಲೋಪದೋಷಗಳನ್ನು ಪಟ್ಟಿ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ತಿರುಗೇಟು ನೀಡುವಂತೆ ಯಾವ ತಯಾರಿಗಳೂ ನಡೆಯುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಎಲ್ ಚೇರಿನಲ್ಲಿ ಓಡಾಡುತ್ತಿದ್ದಾರೆ.

ವಿಶ್ರಾಂತಿಯ ನಡುವೆಯೂ ಬಜೆಟ್‌ನ ಪೂರ್ವಭಾವಿ ಸಭೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಶಾಸಕಾಂಗ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷವನ್ನು ಸಜ್ಜುಗೊಳಿಸಬೇಕಾದ ವಾತಾವರಣವಿದೆ. ಮೂಲಗಳ ಪ್ರಕಾರ ಮಂಗಳವಾರ ವಿದೇಶದಿಂದ ಮರಳಿದ ಬಳಿಕ ಡಿ.ಕೆ.ಶಿವಕುಮಾರ್ ಮೇಲಿಂದ ಮೇಲೆ ಸಭೆಗಳನ್ನು ನಡೆಸುವ ಉಮೇದಿನಲ್ಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News