ಬೆಂಗಳೂರು,ಮಾ.19- ಕುರಿಗಾಹಿಗಳ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯವನ್ನು ತಡೆಯಲು ಶೀಘ್ರ ಕಾನೂನು ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‌ಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಚಿದಾನಂದ್ ಎಂ.ಗೌಡ ಅವರ ಪ್ರಶ್ನೆಗೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕುರಿಗಾಹಿಗಳ ಮೇಲೆ ಹಲ್ಲೆ ನಡೆದಿರುವ ಘಟನೆಗಳು ಬೆಳಕಿಗೆ ಬಂದಿವೆ. ಹೀಗಾಗಿ ಶೀಘ್ರ ಕಾನೂನು ತರಲಾಗುವುದು ಎಂದರು.
ಶಿರಾ ತಾಲ್ಲೂಕಿನಲ್ಲಿ 4,78,500 ಕುರಿಗಳಿವೆ. ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬುದು ಸದಸ್ಯರ ಒತ್ತಾಯವಾಗಿದ್ದು, ಆ ನಿಟ್ಟಿನಲ್ಲಿ ಕುರಿ ಸಾಗಾಣಿಕೆಗೆ ಹೆಚ್ಚು ಪ್ರೋತ್ಸಾಹ ಕೊಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದರು.
ಆಗ ಸಚಿವರು, ನಮ ಮನೆಯಲ್ಲೂ 120 ಕುರಿಗಳಿವೆ. ಲಾಭಾಂಶ ಇರುವುದು ಕುರಿ ಸಾಗಾಣಿಕೆಯಲ್ಲೇ. ಕುರಿ ಸಾಗಾಣಿಕೆದಾರರ ಮೇಲೆ ಪೊಲೀಸ್ ಕೇಸ್ ಹಾಕುತ್ತಿರುವ ಬಗ್ಗೆ ಮಾಹಿತಿ ಕೊಟ್ಟರೆ ಸರ್ಕಾರ ಕಾನೂನು ರೀತಿ ಕ್ರಮ ಜರುಗಿಸಲಿದೆ ಎಂದರು.
ಸದಸ್ಯ ಶಾಂತರಾಮ್ ಗುಡ್ನಾಸಿದ್ದಿ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ಬೆಳಗಾವಿ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದವರು ಪಶುಪಾಲಕರಾಗಿದ್ದು, ಅವರು ಘೋಷಿತ ಬುಡಕಟ್ಟು ಸಮುದಾಯದವರಾಗಿರುವುದಿಲ್ಲ. ಇದರಿಂದ ಅವರಿಗೆ ತೊಂದರೆಯಾಗುತ್ತಿದ್ದು, ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ ಎಂದು ಹೇಳಿದರು.
ಜಾನುವಾರುಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ತಾಲ್ಲೂಕಿನಲ್ಲಿ ಮೇವಿನ ಲಭ್ಯತೆಯು ನಾಲ್ಕು ವಾರಗಳಿಗಿಂತ ಕಡಿಮೆಯಾದ್ದಲ್ಲಿ ಮೇವು ಬ್ಯಾಂಕ್‌ನ್ನು ತೆರೆದು ರೈತರಿಗೆ ರಿಯಾಯ್ತಿ ದರದಲ್ಲಿ ಒಣ ಮೇವನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.
ಒಂದು ವೇಳೆ ಎರಡು ವಾರಗಳಿಗಿಂತ ಮೇವಿನ ಲಭ್ಯತೆ ಕಡಿಮೆಯಾದರೆ ಹೋಬಳಿ ಮಟ್ಟದಲ್ಲಿ ಜಾನುವಾರು ಶಿಬಿರಗಳನ್ನು ತೆರೆದು, ಜಾನುವಾರುಗಳಿಗೆ ಮೇವು, ನೀರನ್ನು ಒದಗಿಸಿ ಸಂರಕ್ಷಿಸಲಾಗುವುದು.
ಮೇವು ಉತ್ಪಾದಿಸುವ ಮೇವಿನ ಬೀಜದ 4,52,463 ಮಿನಿಕಿಟ್‌ಗಳನ್ನು ರೈತರಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 1428 ಮೇವು ಕತ್ತರಿಸುವ ಯಂತ್ರವನ್ನು ವಿತರಿಸಲಾಗಿದೆ. ತೋಟಗಾರಿಕೆ ಬೆಳೆಗಳ ಮಧ್ಯೆ ಮೇವು ಬೆಳೆಗಳ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.