ಬೆಂಗಳೂರು,ಜ.14- ನಗರದಲ್ಲಿ ಹಸುವಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಲಾಗುವುದು. ಕೃತ್ಯದ ಹಿಂದೆ ಯಾರ ಕೈವಾಡವಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಿಂದ ಬಂದಿದ್ದ ವ್ಯಕ್ತಿಯೊಬ್ಬ ಮಾನಸಿಕವಾಗಿ ಅಸ್ವಸ್ಥನಿದ್ದು, ಕುಡಿದು ಹಸಿವಿನ ಕೆಚ್ಚಲನ್ನು ಕತ್ತರಿಸಿದ್ದಾನೆ. ಮಾನವೀಯತೆ ಇರುವ ಯಾರೂ ಈ ರೀತಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಕೃತ್ಯದ ಹಿಂದೆ ಬೇರೆಯವರ ಕೈವಾಡವಿದ್ದರೆ ಆರೋಪಿಯಿಂದಲೇ ಬಾಯಿ ಬಿಡಿಸಲಾಗುವುದು. ಅಮಾಯಕನನ್ನು ಬಂಧಿಸಲಾಗಿದೆ ಎಂದು ಬಿಜೆಪಿಯವರು ಹೇಳುತ್ತಿರುವುದು ಅಸಮರ್ಥನೀಯ. ಘಟನೆಗೆ ಸಂಪರ್ಕ ಇಲ್ಲದೆ ಯಾರನ್ನೂ ಕರೆತರುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ಎಷ್ಟೇ ದೊಡ್ಡವರಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರು ಪ್ರಾಥಮಿಕ ಮಾಹಿತಿ ಆಧರಿಸಿ ಶಂಕಿತರನ್ನು ಕರೆತಂದಿರುತ್ತಾರೆ. ಹೆಚ್ಚಿನ ವಿಚಾರಣೆ ಬಳಿಕ ಯಾರೇ ಭಾಗಿಯಾಗಿದ್ದರೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬೆಳಗಾವಿಯಲ್ಲಿ ಪಕ್ಷದ ಕಚೇರಿ ವಿಚಾರವಾಗಿ ಚರ್ಚೆಯಾಗಿರುವುದು ನಿಜ. ಈ ಹಿಂದೆ ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿವೇಶನ ಪಡೆಯಲು 45 ಲಕ್ಷ ರೂ.ಗಳನ್ನು ಪಾವತಿಸಲಾಗಿತ್ತು. ಅಲ್ಲಿ ಪಕ್ಷದ ಕಚೇರಿ ಅವ್ಯವಸ್ಥೆಯಿಂದ ಕೂಡಿತ್ತು. ದೊಡ್ಡದೊಡ್ಡ ನಾಯಕರಿದ್ದರು. ಉತ್ತಮ ಕಚೇರಿ ಇಲ್ಲ ಎಂದು ಆಕ್ಷೇಪಿಸಿದ್ದೆ. ಸರ್ಕಾರ ನಿವೇಶನ ಕೊಟ್ಟರೆ ಕಟ್ಟಡ ಕಟ್ಟುವುದಾಗಿ ಅಲ್ಲಿನ ನಾಯಕರು ಹೇಳಿದರು. ಅದರಂತೆ ಸಂಪುಟ ಸಭೆಯಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ನಾನು ಅಧ್ಯಕ್ಷ ಸ್ಥಾನ ಬಿಟ್ಟ ನಂತರ ಕಚೇರಿ ಉದ್ಘಾಟನೆಯಾಯಿತು ಎಂದರು.
ನಿನ್ನೆ ಶಾಸಕಾಂಗ ಸಭೆಯಲ್ಲಿ ಈ ವಿಚಾರ ಏಕೆ ಪ್ರಸ್ತಾಪವಾಯಿತು ಎಂದು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಚೇರಿ ನಿರ್ಮಾಣಕ್ಕೆ ಯಾರೆಲ್ಲಾ ಹಣ ಕೊಟ್ಟಿದ್ದಾರೆ ಎಂಬ ವಿವರಣೆ ಹೇಳಿಲ್ಲ. ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಯಾರ ಹೆಸರನ್ನೂ ಕೈಬಿಟ್ಟಿರಲಿಲ್ಲ. ಈ ಮಧ್ಯೆ ಸತೀಶ್ ಜಾರಕಿಹೊಳಿ ಕಚೇರಿ ಕಟ್ಟಡಕ್ಕೆ ಯಾರು ಹೆಚ್ಚು ಹಣ ಕೊಟ್ಟರು ಎಂದು ಉಲ್ಲೇಖಿಸಬಹುದಿತ್ತು ಎಂದು ಹೇಳಿದರು. ಆ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾನು ಜಿಲ್ಲಾಧ್ಯಕ್ಷೆಯಾಗಿದ್ದೆ. ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಇದರ ಹೊರತಾಗಿ ಬೇರೆಯ ವಿಚಾರಗಳೂ ಚರ್ಚೆಯಾಗಲಿಲ್ಲ ಎಂದರು.
ಹೈಕಮಾಂಡ್ಗೆ ವರದಿ :
ಸಚಿವರುಗಳ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಹಿಂದೆಯೇ ವರದಿ ಕೇಳಿತ್ತು. ನಾನು ಕೂಡ ಗೃಹಸಚಿವಾಲಯದಲ್ಲಿ ನಡೆದಿದ್ದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಉಳಿದ ಸಚಿವರು ಅದೇ ರೀತಿಯ ವರದಿ ನೀಡಿದ್ದಾರೆ. ಯಾವೆಲ್ಲಾ ಬದಲಾವಣೆಯನ್ನು ತರಲಾಗಿದೆ. ಯಾವ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ/ಪಂಗಡದ ಶಾಸಕರು, ಸಚಿವರ ಡಿನ್ನರ್ ಮೀಟಿಂಗ್ ಕುರಿತು ನಿನ್ನೆ ಚರ್ಚೆಯಾಗಲಿಲ್ಲ. ತಾವಿನ್ನೂ ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ. ಭೇಟಿಗೆ ಸಮಯ ಕೇಳಿದ್ದೇನೆ. ಆ ಸಂದರ್ಭದಲ್ಲಿ ಯಾವ ಉದ್ದೇಶಕ್ಕೆ ಸಭೆ ನಡೆಸಲಾಗುವುದು ಎಂದು ವಿವರಿಸಿ, ಮನವರಿಕೆ ಮಾಡಿಕೊಡಲು ಯತ್ನಿಸುತ್ತೇನೆ. ಅನುಮತಿ ದೊರೆತರೆ ಸಭೆ ಮಾಡುತ್ತೇವೆ. ಇಲ್ಲವಾದರೆ ಸಭೆ ನಡೆಸುವುದಿಲ್ಲ ಎಂದು ತಿಳಿಸಿದರು.
ಎಲ್ಲಾ ಸಂದರ್ಭದಲ್ಲೂ ಪಕ್ಷವೇ ಮುಖ್ಯ. ಇಲ್ಲಿ ಅಧಿಕಾರ ಅಥವಾ ವ್ಯಕ್ತಿ ಮುಖ್ಯ ಅಲ್ಲ ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ. ನಿನ್ನೆ ಸಭೆಯಲ್ಲೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇದನ್ನು ಪುನರುಚ್ಚರಿಸಿದ್ದಾರೆ.ನಮಲ್ಲಿ ಬೇರೆ ಯಾವುದೇ ರೀತಿಯ ಗೊಂದಲಗಳಿಲ್ಲ. ಅನಗತ್ಯವಾಗಿ ಯಾರೋ ಈ ಬಗ್ಗೆ ಟೀಕೆ ಮಾಡುತ್ತಾರೆ ಎಂದರೆ ಅದಕ್ಕೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ, ಒಂದು ಹುದ್ದೆ ವಿಚಾರ ನಿನ್ನೆ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದರು.
ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರ ಅಪಘಾತದ ಪ್ರಕರಣ ಮಾಹಿತಿ ತಿಳಿಯಿತು. ಗಂಭೀರ ಗಾಯಗಳಾಗಿಲ್ಲ. ಅವರ ಸಹೋದರ ಜೊತೆ ತಾವು ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾಗಿ ಹೇಳಿದರು.