ಬೆಂಗಳೂರು,ಆ.1- ರಾಜ್ಯಪಾಲರು ಮುಖ್ಯಮಂತ್ರಿಯವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ್ದೇ ಆದರೆ ರಾಜ್ಯ ಸರ್ಕಾರ ಕಾನೂನಾತಕ ಹೋರಾಟವನ್ನು ಮುಂದುವರೆಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ರಾಜ್ಯಪಾಲರ ನಡವಳಿಕೆ ಸೇರಿದಂತೆ ಕಾರ್ಯವಿಧಾನಗಳಿಗೆ ಸ್ಪಷ್ಟವಾದ ನಿಯಮಾವಳಿಗಳಿವೆ. ಸಂಪುಟದ ಸಚಿವರ ಸಲಹೆ ಆಧರಿಸಿ ರಾಜ್ಯಪಾಲರು ನಡೆದುಕೊಳ್ಳಬೇಕು. ಆದರೆ ಪ್ರಸ್ತುತ ಬೆಳವಣಿಗೆಯಲ್ಲಿ ರಾಜ್ಯಪಾಲರು ನಡೆದುಕೊಳ್ಳುವ ರೀತಿ ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸುದೀರ್ಘ ವಿವರಣೆ ನೀಡಿದ್ದಾರೆ. ದಾಖಲಾತಿಗಳನ್ನು ಸಲ್ಲಿಸಿದ್ದಾರೆ.ಅದರ ಬಳಿಕ ಕೂಡ ರಾಜ್ಯಪಾಲರು ನೋಟಿಸ್ ನೀಡಿರುವುದು ಪ್ರಶ್ನಾರ್ಹವಾಗಿದೆ. ಎಲ್ಲಿಂದ?, ಯಾರ ಮೂಲಕ ಸ್ಕ್ರಿಪ್ಟ್ ಗಳು ಬರುತ್ತಿವೆ ಎಂಬುದು ಪ್ರಶ್ನಾರ್ಹ. ಈ ಹಿಂದೆ ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ದೆಹಲಿಯಲ್ಲಿ ರಾಜ್ಯಪಾಲರು ಲೆಫ್ಟಿನೆಂಟ್ ಜನರಲ್‌ರವರು ನಡೆದುಕೊಂಡಿರುವುದು ನಮ ಕಣ್ಣೆದುರಿಗೇ ಇದೆ.
ಜನಾಭಿಪ್ರಾಯ ಪಡೆದು ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಕ್ಷೇಪಿಸಿದರು. ರಾಜ್ಯಪಾಲರು ನೀಡಿರುವ ನೋಟಿಸ್‌ಗೆ ಸರ್ಕಾರ ಉತ್ತರ ನೀಡಲಿದೆ. ಅದನ್ನು ಮೀರಿ ಅಭಿಯೋಜನೆಗೆ ಅನುಮತಿ ನೀಡಿದರೆ ಕಾನೂನು ಹೋರಾಟ ಮುಂದುವರೆಸಲಾಗುವುದು.
ರಾಜ್ಯಪಾಲರ ಕಾರ್ಯವಿಧಾನ ಹಾಗೂ ನಡವಳಿಕೆಗಳ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‌ನ 5 ನ್ಯಾಯಮೂರ್ತಿಗಳ, 7 ನ್ಯಾಯಮೂರ್ತಿಗಳ ಪೀಠಗಳು ಪ್ರತ್ಯೇಕ ತೀರ್ಪು ನೀಡಿವೆ ಎಂದು ತಿಳಿಸಿದರು. ನಿನ್ನೆ ರಾತ್ರಿ ಮುಖ್ಯಮಂತ್ರಿಯವರು ನಡೆಸಿರುವ ಸಚಿವರ ಸಭೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ ನೋಟೀಸ್ ವಿಚಾರವಾಗಿ ಸಚಿವರ ಸಲಹೆ ಪಡೆಯುವುದು ಸಹಜ ಎಂದು ಹೇಳಿದರು.