ವಾಷಿಂಗ್ಟನ್,ಡಿ.16– ಕಳೆದ ಹಲವು ತಿಂಗಳಿನಿಂದ ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ಹೆಸರಾಂತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್‌ರವರು (73) ನಿಧನರಾಗಿದ್ದಾರೆ.
73 ವಯಸ್ಸಿನ ಜಾಕಿರ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ದೃಢಪಡಿಸಿದೆ.
ಅವರು ಫೆಬ್ರವರಿ 2024 ರಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಜಾಕಿರ್ ಹುಸೇನ್ ಕಥಕ್ ನೃತ್ಯಗಾರ್ತಿ ಮತ್ತು ಶಿಕ್ಷಕಿ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾಗಿದ್ದ ಅವರು, ಅವರ ಮ್ಯಾನೇಜರ್ ಕೂಡ ಆಗಿದ್ದರು. ಅವರಿಗೆ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಮೊದಲು ಅವರ ಪಿಆರ್‌ಒ ಮೃತಪಟ್ಟಿಲ್ಲ, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಭಾನುವಾರ ತಿಳಿಸಿದ್ದರು. ಅಂತಿಮವಾಗಿ ಅವರ ಕುಟುಂಬ ವರ್ಗ ಹುಸೇನ್ ನಿಧನರಾಗಿದ್ದಾರೆ ಎಂದು ದೃಢಪಡಿಸಿದೆ.
ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ನಂತರ ಅವರು ಅಸ್ವಸ್ಥರಾಗಿದ್ದು, ಐಸಿಯುನಲ್ಲಿ ದಾಖಲಾಗಿದ್ದರು. ನಾವೆಲ್ಲರೂ ಅವರ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಅವರ ಸ್ನೇಹಿತ ಮತ್ತು ಕೊಳಲು ವಾದಕ ರಾಕೇಶ್ ಚೌರಾಸಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ.
ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ 73 ವರ್ಷದ ಸಂಗೀತಗಾರನಿಗೆ ರಕ್ತದೊತ್ತಡ ಸಮಸ್ಯೆ ಉಂಟಾಗಿತ್ತು ಎಂದು ಹುಸೇನ್ ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ಹೇಳಿದ್ದಾರೆ.
ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರರಾಗಿದ್ದ ಜಾಕಿರ್ ಹುಸೇನ್ ತಮ ತಂದೆಯ ಹಾದಿಯಲ್ಲಿ ಸಾಗುವ ಮೂಲಕ ವಿಶ್ವ ವಿಖ್ಯಾತಿಯನ್ನು ಪಡೆದಿದ್ದರು. ತಮ ವೃತ್ತಿ ಜೀವನದಲ್ಲಿ ಅವರು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ್ದರು.
ಸಾಧಕ ದೈತ್ಯನ ಸಾಧನೆಯ ಹಾದಿ :
ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಮಗನಾಗಿರುವ ಜಾಕಿರ್ ಹುಸೇನ್ ಅವರು ತಮ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ಭಾರತ ಸೇರಿದಂತೆ ವಿಶ್ವದಲ್ಲಿಯೇ ತಬಲಾ ವಾದನವನ್ನು ಪ್ರಖ್ಯಾತಿಗೆ ತಂದರು. ಹುಸೇನ್ ತಮ ವೃತ್ತಿಜೀವನದಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ 66ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಗೆದ್ದಿದ್ದರು.
ಅವರು ದಿ ಪರ್ಫೆಕ್ಟ್ ಮರ್ಡರ್, ಮಿಸ್ ಬೀಟೀಸ್ ಚಿಲ್ಡನ್, ಸಾಜ್ ಮತ್ತು ಮಂಟೋ ಮುಂತಾದ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಅವರೊಬ್ಬ ಸಮರ್ಥ ನಟ ಕೂಡ. ಅವರು ಮೊದಲು 1983 ರ ಚಲನಚಿತ್ರ ಹೀಟ್ ಅಂಡ್ ಡಸ್ಟ್‌ನಲ್ಲಿ ನಟರಾಗಿ ಕಾಣಿಸಿಕೊಂಡರು, ಇದರಲ್ಲಿ ಶಶಿ ಕಪೂರ್ ಪ್ರಮುಖ ಪಾತ್ರದಲ್ಲಿದ್ದರು.
ಜಾಕಿರ್ ಹುಸೇನ್ ನಟನೆಯಲ್ಲಿ ಕೂಡಾ ಮೆಚ್ಚುಗೆ ಗಳಿಸಲು ಆರಂಭಿಸಿದಾಗ 1998 ರ ಸಾಜ್ ಚಿತ್ರದಲ್ಲಿ ಶಬಾನಾ ಅಜಿಯೊಂದಿಗೆ ಜಾಕಿರ್ ಹುಸೇನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಇದು ಅದರ ಕಂಟೆಂಟ್ ಕಾರಣದಿಂದ ಸಾಕಷ್ಟು ವಿವಾದಗಳಿಗೆ ಒಳಗಾಗಿತ್ತು. ಶಬಾನಾ ಅಜಿಯ ಪ್ರೇಮಿಯ ಪಾತ್ರದಲ್ಲಿ ಅವರ ನಟನೆಯು ಹೆಚ್ಚು ಮೆಚ್ಚುಗೆ ಗಳಿಸಿತ್ತು.
ಚಿತ್ರದ ಕಥೆಯು ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರ ವೈಯಕ್ತಿಕ ಜೀವನದಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಲತಾ ಮಂಗೇಶ್ಕರ್ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಜಾಕಿರ್ ಹುಸೇನ್ ಅವರು ತಮ 3 ನೇ ವಯಸ್ಸಿನಲ್ಲಿ ತಮ ತಂದೆ ಅಲ್ಲಾ ರಖಾ ಅವರಿಂದ ಸಂಗೀತ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದರು. ಜಾಕಿರ್ ಹುಸೇನ್ ಅವರ ಕುಟುಂಬವು ಸಂಗೀತದೊಂದಿಗೆ ಬಹಳ ಹಳೆಯ ಸಂಬಂಧವನ್ನು ಹೊಂದಿದೆ.
ರವಿಶಂಕರ್ ಮತ್ತು ಅಲಿ ಅಕ್ಬರ್ ಖಾನ್ ಅವರಂತಹ ಪ್ರಸಿದ್ಧ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ. ಅವರು ತಮ ಆರಂಭಿಕ ಶಾಲಾ ಶಿಕ್ಷಣವನ್ನು ಮುಂಬೈನ ಮಾಹಿಮ್‌ನಲ್ಲಿರುವ ಸೇಂಟ್ ಮೈಕೆಲ್ಸ್ ಹೈಸ್ಕೂಲ್‌ನಲ್ಲಿ ಮಾಡಿದರು ಮತ್ತು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆದರು.
ಜಾಕಿರ್ ಹುಸೇನ್ ಅವರಿಗೆ ಭಾರತ ಸರ್ಕಾರವು 1988 ರಲ್ಲಿ ಪದಶ್ರೀ, 2002 ರಲ್ಲಿ ಪದಭೂಷಣ ಮತ್ತು 2023 ರಲ್ಲಿ ಪದವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರು 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಮತ್ತು 2018 ರಲ್ಲಿ ರತ್ನ ಸದಸ್ಯ ಪ್ರಶಸ್ತಿಗಳನ್ನು ಪಡೆದರು.
ಅವರಿಗೆ 1999 ರಲ್ಲಿ ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್‌್ಸನ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ನೀಡಲಾಯಿತು, ಇದು ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಜಾಕಿರ್ ಹುಸೇನ್ ಅವರಿಗೆ 5 ಗ್ರ್ಯಾಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಗಣ್ಯರ ಸಂತಾಪ :
ಭಾರತದ ಹೆಸರಾಂತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ನಿಧನಕ್ಕೆ ರಾಷ್ಟಪತಿ ದ್ರೌಪದಿ ಮುರ್ಮು, ಉಪ ರಾಷ್ಟಪತಿ ಜಗದೀಶ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ :
ಜಾಕೀರ್ ಹುಸೇನ್ ವಿಧಿವಶಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಸಂತಾಪ ಸೂಚಿಸಿದ್ದು, ಅವರ ಸಾವಿನ ಸುದ್ದಿ ತಿಳಿದು ತುಂಬಾ ನೋವಾಗಿದೆ. ತಬಲಾ ಅವರ ಲಯದಿಂದಲೇ ಗಡಿಯಾಚೆಗಿನ ಹೃದಯ ಒಂದುಗೂಡಿಸುತ್ತಿದ್ದರು. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅವರ ಕೊಡುಗೆ ಅಪಾರ ಎಂದಿದ್ದಾರೆ.