Friday, November 22, 2024
Homeರಾಜ್ಯಚೊಂಬು, ತಟ್ಟೆ, ಚಮಚ ವಿಚಾರ ವಿಧಾನಸಭೆಯಲ್ಲಿ ಸ್ವಾರಸ್ಯರಕರ ಚರ್ಚೆ

ಚೊಂಬು, ತಟ್ಟೆ, ಚಮಚ ವಿಚಾರ ವಿಧಾನಸಭೆಯಲ್ಲಿ ಸ್ವಾರಸ್ಯರಕರ ಚರ್ಚೆ

ಬೆಂಗಳೂರು, ಜು.24-ಚೊಂಬು, ತಟ್ಟೆ, ಚಮಚ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಸ್ವಾರಸ್ಯರಕರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಇಂದು ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಉದ್ದೇಶಿಸಿ ನಗುತ್ತೀರಿ ಎಂದರು. ಆಗ ಸಭಾಧ್ಯಕ್ಷರು ನಗುತ್ತಿದ್ದರೂ ಅಗುವುದಿಲ್ಲವೆಂದರೆ ಹೇಗೆ? ಎಂದು ಹೇಳಿದರು.
ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಅವರು ನಿಮ್ಮ ನಗು, ಕೋಪ ನಮಗೆ ಅರ್ಥವಾಗುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರು ಕಳೆದ ಅಧಿವೇಶನದಲ್ಲಿ ಮೊದಲು ಅಧಿವೇಶನಕ್ಕೆ ಬಂದ ಶಾಸಕರಿಗೆ ನಮ್ಮ ಕಚೇರಿಯಲ್ಲಿ ಪ್ರಶಸ್ತಿ ಕೊಡಲಾಗುತ್ತಿದೆ, ಪಡೆದುಕೊಳ್ಳಿ ಎಂದು ಹೇಳಿದರು.

ಆಗ ಬಿಜೆಪಿ ಶಾಸಕ ಆರಗಜ್ಞಾನೇಂದ್ರ ಅವರು, ಅಧಿವೇಶನಕ್ಕೆ ಮೊದಲು ಬಂದವರಿಗೆ ಪ್ರಶಸ್ತಿ ಕೊಡುತ್ತೀರಿ. ಹಾಗೆಯೇ ಅಧಿವೇಶನ ನಡೆಯುವಾಗ ದಿನದ ಕಲಾಪ ಮುಗಿಯುವವರೆಗೂ ಸದನದಲ್ಲಿ ಹಾಜರಿದ್ದ ಶಾಸಕರಿಗೆ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ಸಮ್ಮತಿಸಿದ ಸಭಾಧ್ಯಕ್ಷರು, ಕ್ಯಾಮೇರಾದಲ್ಲಿ ದಾಖಲಾಗುತ್ತದೆ. ಸದನದಲ್ಲಿ ದಿನದ ಕೊನೆಯ ಕಲಾಪದವರೆಗೂ ಇದ್ದ ಶಾಸಕರಿಗೂ ಕೊಡುತ್ತೇವೆ. ರಾಷ್ಟ್ರ ಲಾಂಛನವುಳ್ಳ ಕಪ್ಪುಗಳನ್ನು ಕೊಟ್ಟಿದ್ದೇವೆ. ಹಲವು ಶಾಸಕರು ಹೆಚ್ಚು ಪ್ರಶಸ್ತಿಗೆ ಭಾಜನರಾಗಿರುವುದರಿಂದ ಪ್ಲೇಟ್ ಕೊಡುತ್ತೇವೆ ಎಂದರು.

ಆಗ ಸುನಿಲ್ ಕುಮಾರ್ ಅವರು ಈ ಸರ್ಕಾರದಲ್ಲಿ ಕಪ್ಪು, ಲೋಟ ಅಷ್ಟೇ ಎಂದು ಛೇಡಿಸಿದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ತೃಪ್ತಿಯಾಗುವಂತೆ ಕೊಡುತ್ತೇವೆ ಎಂದು ತಿಳಿಸಿದರು. ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ ಚೊಂಬು ಕೊಟ್ಟವರು ನೀವು, ನಾವು ಕಪ್ಪು ಕೊಟ್ಟಿದ್ದೇವೆ ಎಂದರು. ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ಕಪ್ಪು, ಸಾಸರ್ ಆಯಿತು. ಚಮಚ ಕೊಡಬೇಡಿ ಎಂದಾಗ ನಗೆಯ ಅಲೆ ಸದನದಲ್ಲಿ ತೇಲಿ ಬಂತು.

ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರನ್ನು ಒಟ್ಟಿಗೆ ಸೇರಿಸಿಯೇ ನಾವು ಪ್ರಶಸ್ತಿ ಕೊಡುವುದು ಎಂದು ಹೇಳಿ ಈ ವಿಚಾರದ ಚರ್ಚೆಗೆ ತೆರೆ ಎಳೆದರು.

RELATED ARTICLES

Latest News