Friday, June 28, 2024
Homeರಾಜ್ಯವಿಧಾನಪರಿಷತ್‌ ನೂತನ ಸದಸ್ಯರಿಗೆ ಪ್ರಮಾಣವಚನಕ್ಕೆ ಇನ್ನೂ ಒಂದು ವಾರ ಕಾಯಬೇಕು

ವಿಧಾನಪರಿಷತ್‌ ನೂತನ ಸದಸ್ಯರಿಗೆ ಪ್ರಮಾಣವಚನಕ್ಕೆ ಇನ್ನೂ ಒಂದು ವಾರ ಕಾಯಬೇಕು

ಬೆಂಗಳೂರು,ಜೂ.10- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿರುವ 11 ಮಂದಿ ನೂತನ ಸದಸ್ಯರಾಗಲು ಜೂನ್‌ 18 ರವರೆಗೆ ಕಾಯಬೇಕಿದೆ. ಅದೇ ರೀತಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಆರು ಮಂದಿ ವಿಧಾನಪರಿಷತ್‌ನ ನೂತನ ಸದಸ್ಯರಾಗಲು ಜೂ.22 ರವರೆಗೆ ಕಾಯಬೇಕಿದೆ.

ವಿಧಾನಸಭೆಯಿಂದ ಚುನಾಯಿತರಾಗಿದ್ದ ರಘುನಾಥರಾವ್‌ ಮಲ್ಕಾಪುರೆ, ಡಾ.ಕೆ.ಗೋವಿಂದರಾಜು, ಅರವಿಂದ ಕುಮಾರ್‌ ಅರಳಿ, ಬಿ.ಎಂ.ಫಾರುಖ್‌, ಎನ್‌.ರವಿಕುಮಾರ್‌, ಎಸ್‌‍.ರುದ್ರೇಗೌಡ, ಕೆ.ಹರೀಶ್‌ಕುಮಾರ್‌, ಮುನಿರಾಜುಗೌಡ ಪಿ.ಎಂ., ಎನ್‌.ಎಸ್‌‍.ಬೋಸರಾಜು ಅವರು ಜೂನ್‌ 17 ರಂದು ನಿವೃತ್ತಿಯಾಗಲಿದ್ದಾರೆ. ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ದ್ವೈವಾರ್ಷಿಕ ಚುನಾವಣೆ ನಡೆದಿದೆ. ಆದರೆ ಡಾ.ತೇಜಸ್ವಿನಿ ಗೌಡ ಹಾಗೂ ಕೆ.ಪಿ.ನಂಜುಂಡಿ ವಿಶ್ವಕರ್ಮ ವಿದಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆ 2 ಸ್ಥಾನಗಳು ತೆರವಾಗಿವೆ.

ಸದಸ್ಯರ ನಿವೃತ್ತಿಯ ನಂತರ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆದಿರುವುದರಿಂದ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಜೂ.18 ರವರೆಗೆ ಕಾಯಬೇಕಿದೆ.ವಿಧಾನಸಭೆಯಿಂದ ಮೇಲನೆಯ 11 ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌‍ನ ಐವಾನ್‌ ಡಿಸೋಜ, ಕೆ.ಗೋವಿಂದರಾಜು, ಜಗದೇವ ಗುತ್ತೇದಾರ್‌, ಬಲ್ಕೀಸ್‌‍ ಭಾನು, ಸಚಿವ ಎನ್‌.ಎಸ್‌‍.ಬೋಸರಾಜು ಹಾಗೂ ಡಾ.ಯತೀಂದ್ರ ಎಸ್‌‍. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅದೇ ರೀತಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೂಳೆ ಮಾರುತಿ ರಾವ್‌, ಸಿ.ಟಿ.ರವಿ, ಎನ್‌.ರವಿಕುಮಾರ್‌ ಹಾಗೂ ಜೆಡಿಎಸ್‌‍ನಿಂದ ಸ್ಪರ್ಧಿಸಿದ್ದ ಟಿ.ಎನ್‌.ಜವರಾಯಿಗೌಡ ಅವರು ಸಹ ಅವಿರೋಧವಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ.

3 ಪದವೀಧರ ಹಾಗೂ 3 ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದು ಆರು ಮಂದಿ ಆಯ್ಕೆಯಾಗಿದ್ದಾರೆ. ಅವರೂ ಕೂಡ ಜೂ.22 ರವರೆಗೆ ಕಾಯಬೇಕಿದೆ. ವಿಧಾನಪರಿಷತ್‌ ಸದಸ್ಯರಾದ ಡಾ.ಚಂದ್ರಶೇಖರ್‌ ಪಿ.ಪಾಟೀಲ್‌, ಎ.ದೇವೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್‌‍.ಎಲ್‌.ಬೋಜೇಗೌಡ ಅವರು ಜೂ.21 ರಂದು ನಿವೃತ್ತಿಯಾಗಲಿದ್ದಾರೆ. ಆಯನೂರು ಮಂಜುನಾಥ್‌ ಮತ್ತು ಮರಿತಿಬ್ಬೇಗೌಡ ಅವರು ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಎರಡೂ ಸದಸ್ಯ ಸ್ಥಾನಗಳು ತೆರವಾಗಿವೆ.

ಕಾಂಗ್ರೆಸ್‌‍ನಿಂದ ಸ್ಪರ್ಧಿಸಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಶ್ರೀನಿವಾಸ, ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಪಾಟೀಲ ಅವರು ಚುನಾಯಿತರಾಗಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಧನಂಜಯ ಸರ್ಜಿ ಅವರು ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಜೆಡಿಎಸ್‌‍ನಿಂದ ಸ್ಪರ್ಧಿಸಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿವೇಕಾನಂದ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್‌‍.ಎಂ.ಬೋಜೇಗೌಡ ಚುನಾಯಿತರಾಗಿದ್ದಾರೆ.

17 ಮಂದಿ ಮೇಲನೆ ಸದಸ್ಯರ ಪೈಕಿ ಡಾ.ಚಂದ್ರಶೇಖರ್‌ ಬಿ.ಪಾಟೀಲ್‌, ಎಸ್‌‍.ಎಲ್‌.ಬೋಜೇಗೌಡ, ಕೆ.ಗೋವಿಂದರಾಜು, ಎನ್‌.ಎಸ್‌‍.ಬೋಸರಾಜು, ಎನ್‌.ರವಿಕುಮಾರ್‌ ಪುನರ್‌ ಆಯ್ಕೆಯಾಗಿದ್ದು, ಮತ್ತೆ ವಿಧಾನಪರಿಷತ್‌ ಸದಸ್ಯರಾಗಲಿದ್ದಾರೆ.

RELATED ARTICLES

Latest News