ಬೆಂಗಳೂರು,ಫೆ.28- ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ವಿಧಾನಪರಿಷತ್‍ನಲ್ಲಿ ಗದ್ದಲ ಕೋಲಾಹಲ ಸೃಷ್ಟಿಸಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ದಿನದ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ವೇಳೆ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವಿಷಯ ಪ್ರಸ್ತಾಪಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ಏರ್ಪಟ್ಟು ಸದನವನ್ನು ಕೆಲ ಮುಂದೂಡಲಾಯಿತು.
ವಿಷಯ ಪ್ರಸ್ತಾಪಿಸಿದ ಕೋಟಾ ಶ್ರೀನಿವಾಸ್ ಪೂಜಾರಿ, ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಪರ ವಿಧಾನಸೌಧದ ಆವರಣದಲ್ಲೇ ಘೋಷಣೆ ಕೂಗಿದ್ದಾರೆ. ಇದು ಎಲ್ಲರಿಗೂ ಆತಂಕ ಸೃಷ್ಟಿಸಿದೆ. ಇಂದು ಪಾಕಿಸ್ತಾನ ಜಿಂದಾಬದ್ ಎಂಬುವರು ನಾಳೆ ವಿಧಾನಸೌಧಕ್ಕೆ ಬಾಂಬ್ ಇಡುವುದಿಲ್ಲ ಎಂಬುದಕ್ಕೆ ಖಾತರಿ ಏನು? ಎಂದು ಪ್ರಶ್ನಿಸಿದರು. ಸರ್ಕಾರ ಕೇವಲ ಸುಮೊಟೊ ಪ್ರಕರಣ ದಾಖಲಿಸಿದರೆ ಸಾಲದು. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಇದೊಂದು ಬೇಜಾವಬ್ದಾರಿ ಸರ್ಕಾರ. ತಕ್ಷಣವೇ ಸದನಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಬೇಡಿ : ಸಭಾಧ್ಯಕ್ಷ ಯು.ಟಿ.ಖಾದರ್
ನಾಸಿರ್ ಹುಸೇನ್ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಮಾಧ್ಯಮದವರನ್ನು ಬೆದರಿಸಿದ್ದಾರೆ. ಹಾಗಾದರೆ ಮಾಧ್ಯಮದವರಿಗೆ ಮುಕ್ತ ಸ್ವತಂತ್ರ ಇಲ್ಲವೇ? ಇದರಲ್ಲಿ ಯಾರು ಕೂಡ ರಾಜಕಾರಣ ಬೆರಸಬಾರದು. ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಈ ಸರ್ಕಾರದಂತ ಕೆಟ್ಡ ಸರ್ಕಾರ ಇಲ್ಲ. ಪಾಕಿಸ್ತಾನ ಘೋಷಣೆ ಕೂಗಿದವರ ಪರ ದಾಖಲೆ ಹುಡುಕ್ತಿದ್ದೀರ. ಇಂಥ ಸರ್ಕಾರ ಬೇರೆ ಕಡೆ ಇದ್ದಿದ್ದರೆ ವಜಾ ಆಗುತ್ತಿತ್ತು. ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಆಗ ಸರ್ಕಾರದ ಪರವಾಗಿ ಕಾನೂನು ಮತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಉತ್ತರಿಸಿ, ನಾನು ಪ್ರಾಮಾಣಿಕವಾಗಿ ಹೇಳುವುದಾದರೆ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ನನಗೆ ಸ್ಪಷ್ಟವಾಗಿ ಕೇಳಿಲ್ಲ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸಿಯೇ ದೂರು ದಾಖಲಿಸಿದ್ದೇವೆ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನನಗೆ ಕೇಳಿದ್ದನ್ನು ಹೇಳಿದ್ದೇನೆ.ಇದಾರಚೆಗೆ ಘೋಷಣೆ ಕೇಳಿದ್ದರೆ ದೂರು ನೀಡಿದ್ದೀರಿ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್, ಸಚಿವರಿಗೆ ಆರೋಪಿ ಪಾಕ್ ಪರ ಘೋಷಣೆ ಕೂಗಿರುವ ದನಿ ಕೇಳಿಲಿಲ್ಲವೆಂದರೆ ಅವರ ಕಿವಿ ಕಿವುಡಾಗಿರಬೇಕು ಎಂದು ವ್ಯಂಗ್ಯವಾಡಿದರು. ಈ ವೇಳೆ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಚಿವರಿಗೆ ಸುಳ್ಳು ಹೇಳಲು ಬರುವುದಿಲ್ಲ. ನಿಮಗೆ ಮಾನಮರ್ಯಾದೆ ಇದ್ದರೆ ಮೊದಲು ಕ್ರಮ ಕೈಗೊಳ್ಳಿ ಎಂದರು.
ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದ ಹೈಕೋರ್ಟ್
ಸರ್ಕಾರಕ್ಕೆ ನಾಚಿಕೆಅನ್ನೋದೇ ಇಲ್ವಾ? ಸಿಎಂ ಬಂದು ಇಲ್ಲಿ ಉತ್ತರ ಕೊಡಬೇಕು. ಇಡೀ ರಾಜ್ಯಕ್ಕೆ ಕೇಳಿದ ಘೋಷಣೆ ಸರ್ಕಾರಕ್ಕೆ ಕೇಳಿಲಿಲ್ಲವೇ? ಕಾಂಗ್ರೆಸ್ ಧೋರಣೆ ಪಾಕಿಸ್ತಾನ ಪರವೋ ಯಾರ ಪರ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದಿದ್ದು ಯಾರು? ಕಾಂಗ್ರೆಸ್ ಬದ್ದತೆ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಯಾರೇ ಆಗಲಿ ಇದನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು. ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ ಎಂದರೆ ಹೇಗೆ? ಕೂಡಲೇ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಸೂಚನೆ ನೀಡಿದರು. ನಂತರ ಸದನವನ್ನು ನಡೆಸಲು ಸಭಾಪತಿಗಳು ಮುಂದಾದಾಗ ಪ್ರತಿಪಕ್ಷದ ಸದಸ್ಯರು ತೀವ್ರ ಗದ್ದಲ ಎಬ್ಬಿಸುತ್ತಿದ್ದಂತೆ ಸದನವನ್ನು ಕೆಲಕಾಲ ಮುಂದೂಡಿದರು.