ಬೆಂಗಳೂರು,ಆ.9- ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ರಸಗೊಬ್ಬರದ ಅಭಾವ, ಒಳ ಮೀಸಲಾತಿ, ಮತಗಳ್ಳತನದ ಆರೋಪ ಸೇರಿದಂತೆ ಹಲವು ವಿಚಾರಗಳು ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಉಭಯಸದನಗಳ ಮಳೆಗಾಲ ಅಧಿವೇಶನದಲ್ಲಿ ಪ್ರತಿಧ್ವನಿಸಲಿವೆ.
ಪ್ರಮುಖವಾಗಿ ಈ ವಿಚಾರಗಳು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಡಲಿವೆ.ಸದನದ ಹೊರಗೆ ಈ ವಿಚಾರಗಳ ಬಗ್ಗೆ ಹಲವು ಬಾರಿ ಆರೋಪ-ಪ್ರತ್ಯಾರೋಪಗಳು ನಡೆದಿದ್ದು, ಸದನದಲ್ಲೂ ಪ್ರತಿಧ್ವನಿಸಲಿವೆ. ಆ.11 ರಿಂದ 22 ರವರೆಗೆ 9 ದಿನಗಳ ಕಾಲ ಅಧಿವೇಶನ ನಿಗದಿಯಾಗಿದೆ.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳಲಿದ್ದು, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ.ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿತ್ತು. ಈ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು. ಈ ಕುರಿತಾದ ಸ್ಥಿರೀಕರಣ ಪ್ರಸ್ತಾವ ಮೊದಲ ದಿನವೇ ಮಂಡನೆಯಾಗಲಿದ್ದು, ವಿಧಾನಸಭೆ ಅನುಮೋದನೆ ನೀಡಬೇಕಿದೆ.
ಉಳಿದಂತೆ ಪ್ರಶ್ನೋತ್ತರ ಗಮನ ಸೆಳೆಯುವ ಸೂಚನೆಗಳು, ಕಾಗದ ಪತ್ರಗಳ ಮಂಡನೆ ಸೇರಿದಂತೆ ಸರ್ಕಾರದ ಅಧಿಕೃತ ಕಾರ್ಯಕಲಾಪಗಳು ಜರುಗಲಿವೆ.2025ನೇ ಸಾಲಿನ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ ವಿಧೇಯಕ), ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ ವಿಧೇಯಕ) ಸೇರಿದಂತೆ 18 ಕ್ಕೂ ಹೆಚ್ಚು ಪ್ರಮುಖ ವಿಧೇಯಕಗಳು ಉಭಯ ಸದನಗಳಲ್ಲಿ ಮಂಡನೆಯಾಗಲಿವೆ.
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರದ ಅಭಾವ ಉಂಟಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಚಾರದ ಬಗ್ಗೆ ಈಗಾಗಲೇ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಿದ್ದು, ಸದನದಲ್ಲೂ ಪ್ರಮುಖವಾಗಿ ಪ್ರಸ್ತಾಪಿಸಲಿದೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕಾವೇರಿದ ವಾಗ್ವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.
ಮುಂಗಾರು ಮಳೆ ರಾಜ್ಯದ ಹಲವೆಡೆ ವಾಡಿಕೆಗಿಂತ ಹೆಚ್ಚಾಗಿದ್ದು, ಅತಿವೃಷ್ಟಿಯಾಗಿದೆ. ನದಿಗಳಲ್ಲಿ ಪ್ರವಾಹ ಉಂಟಾಗಿ ಬೆಳೆಹಾನಿಯಾಗಿದ್ದು ರಾಜ್ಯಸರ್ಕಾರ ಈ ತನಕ ಯಾವುದೇ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೆಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿ ಮುಂಗಾರು ಹಂಗಾಮಿನ ಬಿತ್ತನೆಗೆ ಹಿನ್ನಡೆಯಾಗಿ ಅನಾವೃಷ್ಟಿ ಉಂಟಾಗಿದೆ. ಈ ವಿಚಾರವು ಪ್ರಮುಖವಾಗಿ ಚರ್ಚೆಗೆ ಬರಲಿವೆ.ಐಪಿಎಲ್ ಪಂದ್ಯ ವಿಜೇತ ಆರ್‌ಸಿಬಿ ನಗರದಲ್ಲಿ ಹಮಿಕೊಂಡಿದ್ದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ವಿಚಾರವು ಪ್ರಮುಖವಾಗಿ ಉಭಯಸದನಗಳಲ್ಲಿ ಪ್ರತಿಧ್ವನಿಸಿ ಕಾವೇರಿದ ಚರ್ಚೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ಕುರಿತ ವರದಿ ವಿಚಾರವೂ ಚರ್ಚೆಗೆ ಗ್ರಾಸವಾಗಲಿದೆ.ಇತ್ತೀಚೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಮಾಡಿರುವ ಮತಗಳವು ಆರೋಪದ ವಿಚಾರ ಗಂಭೀರ ಚರ್ಚೆಗೆ ಎಡೆಮಾಡಿಕೊಡಲಿದೆ.
ಕಳೆದ 2 ವರ್ಷಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ. ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಡುತ್ತಿಲ್ಲ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಟ್ಟು ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ತಾರತಮ್ಯದ ಆರೋಪವು ಪ್ರಸ್ತಾಪವಾಗುವ ಸಾಧ್ಯತೆ ಅಧಿಕವಾಗಿದೆ.
ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸಕಾಲಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪವು ಸದನದಲ್ಲಿ ಪ್ರತಿಧ್ವನಿಸಲಿದೆ. ಅಲ್ಲದೆ ರಾಜ್ಯದ ಜನರು ಎದುರಿಸುತ್ತಿರುವ ಬೆಲೆ ಏರಿಕೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ವಿಚಾರಗಳು ಪ್ರಾಸಂಗಿಕವಾಗಿ ಪ್ರಸ್ತಾಪವಾಗಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ, ಜೆಡಿಎಸ್ ಸಜ್ಜಾಗಿವೆ. ಅದೇ ರೀತಿ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಕೂಡ ತಯಾರಿ ನಡೆಸಿದೆ.
- ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಬಿಜೆಪಿ ತಯಾರಿ
- ಬೆಂಗಳೂರಿಗರೇ ಗಮನಿಸಿ, ನಾಳೆ ಪ್ರಾಧಾನಿ ಆಗಮನದ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಮಾರ್ಗ ಬದಲಾವಣೆ
- “ಸುಳ್ಳುಬುರುಕ, ರಣಹೇಡಿ ರಾಹುಲ್ ಗಾಂಧಿ ನನ್ನ 5 ಪ್ರಶ್ನೆ” : ಆರ್.ಅಶೋಕ್ ವಾಗ್ದಾಳಿ
- ನಾಳೆ ರಾಜ್ಯಕ್ಕಾಗಮಿಸುತ್ತಿದ್ದಾರೆ ಪ್ರಧಾನಿ ಮೋದಿ, ಹಳದಿ ಮೆಟ್ರೋ ಹಾಗೂ ವಂದೇ ಭಾರತ್ ರೈಲುಗಳಿಗೆ ಚಾಲನೆ
- ಭಾರತಕ್ಕೆ ಬೇಕಾಗಿದ್ದ ಕುಖ್ಯಾತ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ನೇಪಾಳದಲ್ಲಿ ಬಂಧನ