ಹೆಚ್.ಡಿ.ಕೋಟೆ,ಸೆ.10- ಹಸಿದ ಚಿರತೆಗೆ ಸಾಧು ಪ್ರಾಣಿಗಳು ಸಿಕ್ಕರೆ ಸಾಕು, ಬಗೆದು ತಿನ್ನುತ್ತವೆ. ಆದರೆ ಬೋನಿನಲ್ಲಿ ಹಸುವಿನ ಕರು ಇದ್ದರೂ ಸಹ ಅದನ್ನು ತಿನ್ನದೆ ತಾಯಿಯಂತೆ ಮಮಕಾರ ತೋರಿಸಿ ಅಚ್ಚರಿ ಮೂಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಪಟ್ಟಣಕ್ಕೆ ಹೊಂದಿಕೊಂಡಂತಿರುವ ವಿವಿಧ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಕಳೆದ 15 ದಿನಗಳ ಹಿಂದೆ ಎತ್ತನಾಯ್ಕರ ಎಂಬುವರ ಜಮೀನಿನಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿತ್ತು. ಇದರಿಂದ ರೈತರು ಕಂಗಾಲಾಗಿದ್ದರು.
ಚಿರತೆ ಸೆರೆಗಾಗಿ ಹೆಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ಇಲಾಖಾಧಿಕಾರಿಗಳು ಬೋನಿಟ್ಟಿದ್ದರು. ಅದರಲ್ಲಿ ಸೀಮೆಹಸುವಿನ ಕರುವೊಂದನ್ನು ಕಟ್ಟಿ ಚಿರತೆ ಸೆರೆಗೆ ಪ್ಲಾನ್ ಮಾಡಿದ್ದರು. ಆಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಆದರೆ ಬೋನಿನಲ್ಲೇ ಇದ್ದ ಕರುವನ್ನು ತಿನ್ನದೆ ಹಾಗೆಯೇ ಬಿಟ್ಟಿದೆ.
ಬೆಳಿಗ್ಗೆ ಗ್ರಾಮಸ್ಥರು ಬೋನಿನ ಬಳಿ ಬಂದು ನೋಡಿದಾಗ ಚಿರತೆ ಸೆರೆಯಾಗಿದ್ದು, ಜೊತೆಗೆ ಕರುವೂ ಕೂಡ ಜೀವಂತವಾಗಿದ್ದುದು ಅಚ್ಚರಿ ಮೂಡಿಸಿದೆ.ನರಭಕ್ಷಕ ಚಿರತೆ ಕರುವನ್ನು ತಿನ್ನದೆ ತಾಯಿ ಮಮತೆಯನ್ನು ತೋರಿದ್ದು, ವ್ಯಾಘ್ರ ಪ್ರಾಣಿಗಳಿಗೂ ಸಹ ಮಮತೆ ಇರುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.