ಬೆಂಗಳೂರು,ಜೂ.19- ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ದರ ಹೆಚ್ಚಳ ಮಾಡಿದ್ದು, ವಾಹನ ಸವಾರರು ಪೆಟ್ರೋಲ್ , ಡೀಸೆಲ್‌ನ್ನು ಖರೀದಿ ಮಾಡುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿ ಕಡಿಮೆ ಇರುವುದರಿಂದ ನೆರೆ ರಾಜ್ಯದವರು ಬಂದು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿಯವರು ಪೊಲೀಸರ ಅನುಮತಿ ಪಡೆದು ರಸ್ತೆತಡೆ ನಡೆಸಬಹುದಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ರಸ್ತೆತಡೆ ಮಾಡುವಂತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವಂತಿಲ್ಲ, ಅನುಮತಿ ಪಡೆಯದೆ ಇಲ್ಲವೇ ಅನುಮತಿಯ ಅವಧಿ ಮೀರಿ ರಸ್ತೆ ತಡೆ ನಡೆಸಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ. ರಸ್ತೆ ತಡೆ ಮಾಡುವವರನ್ನು ಯಾವ ರೀತಿ ತೆರವುಗೊಳಿಸಬೇಕೋ ಆ ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯಬಿದ್ದರೆ ಲಾಠಿಚಾರ್ಜ್ ಮಾಡಲಾಗುವುದು ಎಂದರು.
ಪ್ರತಿಭಟನೆ ಮಾಡಲು ಹಕ್ಕಿದೆ. ಈಗಾಗಲೇ ಹಲವು ಸಂಘಸಂಸ್ಥೆ, ಸಾರ್ವಜನಿಕರು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಅಡ್ಡಿ ಪಡಿಸಿಲ್ಲ ಎಂದರು.ನೀರಿನ ದರ ಹಾಗೂ ಬಸ್ ಟಿಕೆಟ್ ದರ ಹೆಚ್ಚಳ ಪ್ರಸ್ತಾಪ ಆಯಾಯ ಇಲಾಖೆಗೆ ಸಂಬಂಧಿಸಿದ್ದು, ನಮಗೇನಾದರೂ ಅವುಗಳ ಬಗ್ಗೆ ದೂರು ಬಂದಾಗ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.