ಇಡೀ ಜಗತ್ತು ಗೌರವಿಸುವ ಹಾಗೂ ಎಲ್ಲಾ ಜನಾಂಗದವರು ಒಪ್ಪಿಕೊಳ್ಳುವ 12ನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಜ್ಯೋತಿ ಬಸವಣ್ಣನವರು ಜನಿಸಿದ್ದು, ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಬಸವಣ್ಣ ಅವರು ಬಾಲ್ಯದಿಂದಲೇ ಅವರ ಚಿಂತನಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುತ್ತಿದ್ದ ಗುಣ ಹೊಂದಿದ್ದವರು. ತನ್ನ ಸಮಾಜ ಕೂಡ ಹೀಗೆ ಇರಬೇಕೆಂದು ಸಮಾಜದ ಏಳಿಗೆಗಾಗಿ ದುಡಿದ ಮಹಾನ್ ಸುಧಾರಕರು ಬಸವಣ್ಣ.ಕಲಚೂರಿ ರಾಜವಂಶದ ದೊರೆ ಬಿಜ್ಜಳರ ಆಳ್ವಿಕೆಯಲ್ಲಿ ಬಸವಣ್ಣ ಅವರು 12ನೇ ಶತಮಾನದ ಭಾರತೀಯ ತತ್ವಜ್ಞಾನಿ, ರಾಜ ನೀತಿಜ್ಞ, ಶಿವ – ಕೇಂದ್ರಿತ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿ ಮತ್ತು ಸಮಾಜ ಸುಧಾರಕರಾಗಿದ್ದರು.
ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ವಚನಕಾರರ ಕೊಡುಗೆ ವಿಶಿಷ್ಟವಾದದ್ದು. ಅಲ್ಲಮಪ್ರಭು, ಅಕ್ಕಮಹಾದೇವಿ, ದಾಸಿಮಯ್ಯ, ಸಿದ್ದಾರಾಮ ಮುಂತಾದ ಶ್ರೇಷ್ಠ ವಚನಕಾರರಲ್ಲಿ ಅತಿ ಶ್ರೇಷ್ಠ ವಚನಕಾರರು ಬಸವಣ್ಣ.
ಬಸವಣ್ಣ ಅವರು ತಮ ಭಕ್ತಿ ಪ್ರಧಾನ ವಚನಗಳಲ್ಲಿ ಸಮಾಜದ ಅಂಕು- ಡೊಂಕುಗಳನ್ನು ಹಾಗೂ ಅಂದಿನ ಕಾಲದ ಸಮಾಜದಲ್ಲಿದ್ದ ಮೇಲು- ಕೀಳು, ಡಂಭಾಚಾರ, ಮೂಢ ನಂಬಿಕೆ ಮುಂತಾದವುಗಳ ವಿರುದ್ಧ ಧ್ವನಿ ಎತ್ತಿದ್ದನ್ನು ಅವರ ವಚನಗಳಲ್ಲಿ ಗಮನಿಸಬಹುದು. ಬಸವಣ್ಣ ಅವರು `ವಚನ’ಗಳೆಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿದರು. ಬಸವಣ್ಣನ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂದು ಅವರು ವಚನಗಳ ಮೂಲಕ ನುಡಿದಿದ್ದ ಮಾತುಗಳನ್ನು ಪಾಲಿಸಿದರೆ ಇಡೀ ಸಮಾಜದ ಶಾಂತಿಯ ನೆಲೆವೀಡಾಗುವುದರಲ್ಲಿ ಸಂಶಯವಿಲ್ಲ.
ಬಸವೇಶ್ವರರು ಮಾನವೀಯತೆಯ ಏಕತೆ, ಸಮಾನತೆ, ಸಹೋದರತ್ವ ಸಂದೇಶವನ್ನು ವಿಶ್ವಾದ್ಯಂತ ನೀಡಿದ್ದರಿಂದ ಸಮಕಾಲೀನ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು ಅತ್ಯಂತ ಪ್ರಸ್ತುತರಾಗಿದ್ದಾರೆ.
ಬಸವಣ್ಣ ಅವರ ನೇತೃತ್ವದಲ್ಲಿ ಜಾತಿ ಭೇದ ಮತ್ತು ಲಿಂಗತಾರಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ನಡೆಯಿತು. ಭಾರತದ ಸಂವಿಧಾನವು ಇದನ್ನೇ ಎತ್ತಿ ಹಿಡಿದಿದೆ. ಬಸವಣ್ಣ ಅವರು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದರಲ್ಲದೆ, ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸಿದರು. ಅಂರ್ತ ಜಾತಿಯ ವಿವಾಹಕ್ಕೆ ಪ್ರೋತ್ಸಾಹ, ಸಹ ಭೋಜನಕ್ಕೆ ಪ್ರೋತ್ಸಾಹ, ಅಸ್ಪ್ರಶ್ಯತೆಯ ಖಂಡನೆ, ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದನೆ, ದಾಸೋಹ ತತ್ವವನ್ನು ಪ್ರತಿಪಾದಿಸುತ್ತಾರೆ. ಪ್ರತಿಯೊಬ್ಬರೂ ತಮ ಆದಾಯದಲ್ಲಿ ಒಂದು ಪಾಲನ್ನು ದಾಸೋಹಕ್ಕೆ ಮೀಸಲಿಡಬೇಕು ಎಂದು ಹೇಳಿದ್ದರು.
ಕಾಯಕವೇ ಕೈಲಾಸ:
ಬಸವಣ್ಣನವರು ಕಾಯಕ ತತ್ವವನ್ನು ಬಲವಾಗಿ ಪ್ರತಿಪಾದಿಸಿದ್ದರು. ಕಾಯಕವಿಲ್ಲದೆ ಗುರು ಲಿಂಗ ಜಂಗಮರಿಗೂ ಮುಕ್ತಿಯಿಲ್ಲ ಎಂಬ ಹಾಗೂ ಕಾಯಕವೇ ಕೈಲಾಸ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಕಾಯಕದಲ್ಲಿ ಮೇಲು ಕೀಳು ಎಂಬ ಭಾವ ಸಲ್ಲದು. ಶರಣರು ಮಾಡುವ ಕಾಯಕವು ಸತ್ಯ ಶುದ್ಧವಾಗಿರಬೇಕು, ಸಮಾಜಮುಖಿಯಾಗಿರಬೇಕು ಎಂಬುದು ಬಸವಣ್ಣನವರ ಅಚಲವಾದ ನಂಬಿಕೆ.
ಸ್ತ್ರೀ ಸಮಾನತೆ: ಬಸವಣ್ಣ ಅವರು ಶತ-ಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದ ಸ್ತ್ರೀ ಸಮುದಾಯದ ಧ್ವನಿಯಾಗಿದ್ದರು. ಲಿಂಗಭೇದದ ವಿರುದ್ಧ ಸಿಡಿದೇಳುವ ಮೂಲಕ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆ ಮಾಡಿದವರು ಬಸವಣ್ಣನವರು. ಹೆಣ್ಣು ಗಂಡು ಎನ್ನುವ ಕಲ್ಪನೆ ಕೇವಲ ದೇಹಕ್ಕೆ ಮಾತ್ರವೇ ವಿನಃ ಆತಕ್ಕೆ ಅಲ್ಲ ಎಂಬ ವಿಶಿಷ್ಟ ಕಲ್ಪನೆ ನೀಡಿದ ಹಿರಿಮೆ ಬಸವಣ್ಣ ಅವರಿಗೆ ಸಲ್ಲುತ್ತದೆ.
ಜಾತ್ಯತೀತ ಸಮಾಜದ ಕಲ್ಪನೆ: ಜಾತಿ ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷವನ್ನು ಕುರಿತು ನೊಂದು ನುಡಿದ ಬಸವಣ್ಣ ಅವರು,
ಇವನಾರವ,
ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮವ,
ಇವ ನಮವ,
ಇವ ನಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ.
ಎನ್ನುವ ಮೂಲಕ ಇಡೀ ವಿಶ್ವಕ್ಕೆ ನೀಡಿದ ಒಂದು ದಿವ್ಯ ಸಂದೇಶವಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಸರಿ ಸಮಾನರೇ ಎಲ್ಲರೂ ನಮವರೇ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಸಂದೇಶ ನೀಡಿದರು.
ಬಸವಣ್ಣ ಅವರ ಹಾದಿಯಲ್ಲಿ ಸರ್ಕಾರ:
ಬಸವಣ್ಣ ಅವರು ಕಾಯಕವೇ ಕೈಲಾಸ ಎಂಬ ಮಂತ್ರದ ಮೂಲಕ ಕಾಯಕದ ಶ್ರೇಷ್ಠತೆಯನ್ನು ಮನಗಾಣಿಸಿದವರು. ದಾಸೋಹದ ಪರಿಕಲ್ಪನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಇದರ ಅನುಸಾರ ಶ್ರಮಪಟ್ಟು ಗಳಿಸಿದ ಸಂಪತ್ತು ತನ್ನೊಬ್ಬನಿಗಾಗಿ ಅಲ್ಲ; ಅದು ಸಮಾಜದ ಒಳಿತಿಗಾಗಿ ಬಳಕೆಯಾಗ ತಕ್ಕದ್ದು. ಅದಕ್ಕಾಗಿ, ಅನ್ನ ದಾಸೋಹ, ಜ್ನಾನ ದಾಸೋಹ, ಕಾಯಕ ದಾಸೋಹ ನಡೆಸಬೇಕೆಂದು ಪ್ರಾದಿಪಾದಿಸಿದ್ದರು. ಬಸವಣ್ಣ ಅವರ ತತ್ವದ ದಾರಿಯಲ್ಲಿ ನಮ ಸರ್ಕಾರ ಸಾಗುತ್ತಿದೆ. ಅವರ ಅನ್ನ ದಾಸೋಹ ಕಲ್ಪನೆಯನ್ನು ಸಾಕಾರಗೊಳಿಸಲು ಅನ್ನ ಭಾಗ್ಯ ಯೋಜನೆಯನ್ನು ನಮ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.
ಜಗಜ್ಯೋತಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಅವರ ತತ್ವಾದರ್ಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಜಾತೀಯತೆ ತಾಂಡವವಾಡುತ್ತಿರುವ ಕಲುಷಿತ ವಾತಾವರಣದಲ್ಲಿ ಬಸವಣ್ಣ ಅವರ ತತ್ವಗಳ ಪ್ರೇರಣೆ ಆಗುವಂತಹ ವಾತಾವರಣ ನಿರ್ಮಿಸುವುದೇ ಸಿದ್ದರಾಮಯ್ಯ ಅವರ ನೇತೃತ್ವದ ನಮ ಸರ್ಕಾರದ ಉದ್ದೇಶ.
ಅನುಭವ ಮಂಟಪ ಮರು ಸೃಷ್ಟಿ: ಬಸವಾದಿ ಶರಣರು ತಮ ಎಲ್ಲಾ ಶರಣ ಸಮೂಹದೊಂದಿಗೆ ಅನುಭಾವದ ಬಗ್ಗೆ ಚಿಂತನೆ, ವಿಚಾರ ವಿನಿಮಯ ಮತ್ತು ಸಂವಾದಕ್ಕಾಗಿ ಬಸವಣ್ಣ ಅವರು ನಿರ್ಮಿಸಿಕೊಂಡಿದ್ದ ಚಿಂತನೆಯ ವೇದಿಕೆಯೇ ಅನುಭವ ಮಂಟಪ. ಇದು ಜಗತ್ತಿನ ಮೊದಲನೆಯ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ. ಅಲ್ಲಿನ ಎಲ್ಲ ಚಟುವಟಿಕೆಗಳು ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲೇ ಜರುಗುತ್ತಿದ್ದವು. ಯಾವುದೇ ಜಾತಿ, ಮತ, ಲಿಂಗ ಭೇದ ಭಾವವಿಲ್ಲದೆ, ಅಲ್ಲಿ ಎಲ್ಲ ಸಮುದಾಯವರು ಒಟ್ಟಿಗೆ ಸೇರಿ ಚಿಂತನೆ ಮತ್ತು ಚರ್ಚೆ ನಡೆಸುತ್ತಿದ್ದರು. ಅಂದೇ ಬಸವಣ್ಣ ಅವರು ರಾಜಕೀಯ ಪರಿಕಲ್ಪನೆ, ಚರ್ಚೆಗಳ ತಮದೇ ಬೀಜ ಬಿತ್ತಿದ್ದರು. ಇಂದು ಬಸವಣ್ಣ ಅವರು ಹಾಕಿ ಕೊಟ್ಟ ಮಾದರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಂದಿನ ಬಸವಣ್ಣ ಅವರ ಮಾದರಿಯ ಸಂಸತ್ತನ್ನು ದೇಶ ಹೊಂದಿದ್ದು, ಸಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತಿದ್ದೇವೆ.
ವೈಚಾರಿಕ ಚಿಂತನೆ:
ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ, ಉಂಬ ಜಂಗಮ ಬಂದಡೆ ನಡೆಯೆಂಬರು, ಉಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ, ನಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ: ಎಂಬ ಈ ವಚನದ ಮೂಲಕ ಮೌಢ್ಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ಡಾಂಭಿಕ ಆಚರಣೆಗಳ ಬಗ್ಗೆಯೂ ಜನ ಸಮೂಹವನ್ನು ಎಚ್ಚರಿಸಿದವರು ಬಸವಣ್ಣನವರು. ಕಲ್ಲ ನಾಗರಕ್ಕೆ ಹಾಲೆರೆಯುವವರು ನಿಜವಾದ ಹಾವೇ ಪ್ರತ್ಯಕ್ಷವಾದಾಗ ಕೊಲ್ಲಲು ಪ್ರಯತಿಸುತ್ತಾರೆ. ಹಸಿದ ಜಂಗಮ ಬಂದರೆ ಅನ್ನ ನೀಡದೆ, ಉಣದಿರುವ ಲಿಂಗಕ್ಕೆ ಭಕ್ಷ್ಯ ಭೋಜನಗಳನ್ನಿಟ್ಟು ನೈವೇದ್ಯ ಮಾಡುತ್ತಾರೆ. ಇದೆಂತಹ ವಿಪರ್ಯಾಸ ಎಂದು ಪ್ರಶ್ನಿಸುವ ಮೂಲಕ ವೈಚಾರಿಕ ಚಿಂತನೆಗೆ ಆದ್ಯತೆ ನೀಡಿದವರು ಬಸವಣ್ಣ.
ಹೀಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಚಾರಿಕ ನೆಲೆಗಟ್ಟಿನ ಬಸವಣ್ಣ ಅವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ. 12ನೇ ಶತಮಾನದಲ್ಲಿ ಕ್ರಾಂತಿಕಾರಕ ಪುರುಷರಾಗಿ, ಸಮಾಜ ಸುಧಾಕರಾಗಿ, ಕವಿಗಳಾಗಿ ಸಮಾಜವನ್ನು ಸುಧಾರಿಸಲು ಸಾಕಷ್ಟು ಶ್ರಮಪಟ್ಟ ಬಸವಣ್ಣನವರ ವ್ಯಕ್ತಿತ್ವವನ್ನು ಎಷ್ಟು ಹೇಳಿದರೂ ತೀರದಂತದ್ದು. ಹೀಗಾಗಿಯೇ ಅವರ ವ್ಯಕ್ತಿತ್ವ ವಿಶ್ವ ಮಾನ್ಯವಾಗಿ ಕಂಗೊಳಿಸುತ್ತಿದೆ. ಕರ್ನಾಟಕದ ಮಾರ್ಟಿನ್ ಲೂಥರ್ ಎಂದೇ ಕರೆಯಲ್ಪಡುವ ಬಸವಣ್ಣ ಅವರ ತತ್ವ ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ತಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತಾಗಲಿ. ನಾಡಿನ ಸಮಸ್ತ ಜನತೆಗೆ ಮತ್ತೊಮೆ ಬಸವ ಜಯಂತಿಯ ಶುಭಾಶಯಗಳು.
ಬಸವಣ್ಣ ಅವರು ಯಾವುದೇ ಒಂದು ಧರ್ಮಕ್ಕೆ ಸೀಮೀತವಾದವರಲ್ಲ. ಅವರು ಇಡೀ ಮಾನವ ಕುಲಕೋಟಿಗೆ ಸಲ್ಲುವ ವ್ಯಕ್ತಿ. ಬಸವಣ್ಣ ಅವರು 12ನೇ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ಧವಾಗಿ ವಚನ ಸಾಹಿತ್ಯದ ಮೂಲಕ ಉತ್ತರ ನೀಡಿದರು. ಇಂತಹ ಮಹಾನ್ ಸುಧಾರಕ ಬಸವಣ್ಣ ನಮ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಬಾವ್ದಾರಿ ಹೊಂದಿರುವುದು ನನ್ನ ಸುದೈವ.
ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆವು. ಸಾಂಸ್ಕೃತಿಕ ನಾಯಕ ಎಂದು ಏಕೆ ಘೋಷಣೆ ಮಾಡಿದೆವು ಎಂಬುದನ್ನು ಜನತೆಗೆ ತಿಳಿಸುವ ಕೆಲಸ ಆಗ ಬೇಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಅಯವ್ಯಯದಲ್ಲಿ ನಮ ಮುಖ್ಯಮಂತ್ರಿಗಳು ಬಸವಣ್ಣ ಅವರ ಕುರಿತು ಕಾರ್ಯಕ್ರಮ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಕೂಡಲಸಂಗಮದಲ್ಲಿ ಅನುಭವ ಮಂಟಪ- ಬಸವಾದಿ ಶರಣರ ವೈಭವದ ಉತ್ಸವವನ್ನು ಇದೇ ಏ.29 ಮತ್ತು 30 ರಂದು ಮಾಡಲಾಗುತ್ತಿದೆ. ಸಾಂಸ್ಕೃತಿಕ ಉತ್ಸವದಲ್ಲಿ ಎಲ್ಲ ಧರ್ಮಗಳ ಸಂಗಮವಾಗಲಿದೆ. ಎಲ್ಲರನ್ನೂ ಒಳಗೊಂಡ ಎಲ್ಲರ ಕಲ್ಯಾಣಕ್ಕಾಗಿ ದುಡಿದ ಬಸವಾದಿ ಶರಣರ ನೆನೆಯೋಣ ಬನ್ನಿ.
-ಶಿವರಾಜ್ ಎಸ್.ತಂಗಡಗಿ,
ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು