Monday, November 25, 2024
Homeಮನರಂಜನೆಶಿವಣ್ಣನ ಚಿತ್ರಗಳಿಗೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಪತ್ರ

ಶಿವಣ್ಣನ ಚಿತ್ರಗಳಿಗೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಪತ್ರ

ಬೆಂಗಳೂರು,ಮಾ.22- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿರುವ ಖ್ಯಾತ ನಟ ಶಿವರಾಜ್‍ಕುಮಾರ್ ಅಭಿನಯದ ಚಲನಚಿತ್ರಗಳು, ಜಾಹಿರಾತು, ಚಿತ್ರಗಳು ಹಾಗೂ ಫಲಕಗಳನ್ನು ಪ್ರದರ್ಶಿಸದಂತೆ ನಿರ್ಬಂಧ ಹಾಕಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು(ಕೌಟಿಲ್ಯ) ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದಾರೆ.
ಲೋಕಸಭಾ ಚುನಾವಣೆ ಮುಗಿಯುವವರೆಗೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸಿನಿಮಾ ಮಂದಿರಗಳು, ಟಿವಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ಈ ಕೂಡಲೇ ಆದೇಶ ಹೊರಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಶಿವರಾಜ್‍ಕುಮಾರ್ ಕನ್ನಡದ ಹೆಸರಾಂತ ಚಲನಚಿತ್ರ ನಟರಾಗಿದ್ದಾರೆ. ಅವರ ಪತ್ನಿ ಗೀತಾ ಶಿವರಾಜ್‍ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜನಪ್ರಿಯ ನಟರಾಗಿರುವ ಕಾರಣ ಶಿವರಾಜ್‍ಕುಮಾರ್ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಚುನಾವಣಾ ಆಯೋಗ ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕೆಂದು ರಘು ಮನವಿ ಮಾಡಿದ್ದಾರೆ.

ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು, ಸ್ಥಳೀಯ ಸಂಸ್ಥೆಗಳು ಮತ್ತಿತರ ಕಡೆ ಶಿವರಾಜ್‍ಕುಮಾರ್ ಅವರ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂದು ರಘು ಚುನಾವಣಾ ಆಯೋಗಕ್ಕೆ ಕೋರಿಕೊಂಡಿದ್ದಾರೆ.

RELATED ARTICLES

Latest News