ಬೆಂಗಳೂರು, ಡಿ.12- ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ರೂಪುಗೊಂಡಿದ್ದು ಇದರ ಪರಿಣಾಮ ರಾಜ್ಯದ ಮೇಲೂ ತಟ್ಟಿದ್ದು ಸಿಲಾಕಾನಿ ಸಿಟಿಯಲ್ಲಿ ಇಂದು ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದೆ.
ಕಳೆದ ಒಂದು ವಾರದ ಹಿಂದೆ ಫೆಂಗಲ್ ಚಂಡಮಾರುತ ಪರಿಣಾಮದಿಂದ ನಾಲ್ಕೈದು ದಿನ ಮಳೆಯಾಗಿದ್ದು ಜನರು ಭಾರಿ ಸಮಸ್ಯೆ ಅನುಭವಿಸಿದ್ದರು. ಆದರೆ ಈಗ ಮತ್ತೊಂದು ಚಂಡಮಾರುತ ಅಪ್ಪಳಿಸಿದ್ದು ಶೀತ ಗಾಳಿಯೊಂದಿಗೆ ತುಂತುರು ಮಳೆಯಾಗುತ್ತಿದ್ದು ಇಂದು ಬೆಳಗ್ಗೆ ಶಾಲಾ- ಕಾಲೇಜು ಹಾಗೂ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದವರು ತೊಂದರೆ ಅನುಭವಿಸುವಂತಾಯಿತು.
ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಡಿ 18ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮೂಲಗಳು ತಿಳಿಸಿವೆ.
ಫೆಂಗಲ್ ಚಂಡಮಾರುತದಿಂದ ಕೆಲವೆಡೆ ತರಕಾರಿ ಸೇರಿದಂತೆ ಇತರೆ ಬೆಳೆಗಳು ನಾಶವಾಗಿದ್ದು ಅನ್ನದಾತರು ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಚಂಡಮಾರುತ ರೈತರ ಗಾಯದ ಮೇಲೆ ಬರೆ ಎಳೆಯಲು ಬಂದಂತಿದೆ.
ಫೆಂಗಲ್ ಚಂಡಮಾರುತದಿಂದ ಬೆಳೆ ನಾಶವಾಗಿ ಬೆಲೆ ಹೆಚ್ಚಳವಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಮತ್ತೆ ಮಳೆ ಬಂದು ಬೆಳೆ ನಾಶವಾದರೆ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.