Sunday, July 27, 2025
Homeರಾಜ್ಯನಿಗಮ-ಮಂಡಳಿಗೆ 12 ಜನ ಪಟ್ಟಿ ರೆಡಿ..?

ನಿಗಮ-ಮಂಡಳಿಗೆ 12 ಜನ ಪಟ್ಟಿ ರೆಡಿ..?

List of 12 people ready for the corporation board Appointment

ಬೆಂಗಳೂರು, ಜು.27- ಬಾಕಿಯಿರುವ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ, ಕಾರ್ಯಕರ್ತರು ಹಾಗೂ ಮುಖಂಡರ ಬಹುದಿನಗಳ ಬೇಡಿಕೆಗೆ ಸ್ಪಂದಿಸಲು ಕಾಂಗ್ರೆಸ್‌‍ ಮುಂದಾಗಿದ್ದು, ಸುಮಾರು 12 ಜನರ ಪಟ್ಟಿ ಸಿದ್ಧಗೊಂಡಿದೆ.ಸಂಭವನೀಯರ ಪಟ್ಟಿಯಲ್ಲಿ ಇಬ್ಬರು ಶಾಸಕರ ಹೆಸರುಗಳಿದ್ದು, ಇನ್ನಿಬ್ಬರ ಶಾಸಕರ ಕುಟುಂಬದ ಸದಸ್ಯರಿಗೆ ಮಣೆ ಹಾಕುವ ಇಂಗಿತ ವ್ಯಕ್ತವಾಗಿದೆ.

ಪಕ್ಷಕ್ಕಾಗಿ ಶ್ರಮಿಸಿದ, ಹಲವು ತ್ಯಾಗಗಳ ಮೂಲಕ ನೋವು ನುಂಗಿಕೊಂಡ ಪ್ರಮುಖರನ್ನು ಆಯ್ದು ನಿಗಮ ಮಂಡಳಿಗಳಿಗೆ ನಿಯೋಜಿಸುವ ಉದ್ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಕ್ತಪಡಿಸಿದ್ದಾರೆ. ಅದರಂತೆ ಸಂಭನೀಯರ ಪಟ್ಟಿ ಸಿದ್ಧಗೊಂಡಿದೆ.

ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್‌‍, ಮಾಯಕೊಂಡ ಶಾಸಕ ಬಸಂತಪ್ಪ, ಕಾಂಗ್ರೆಸ್‌‍ನ ಪ್ರಧಾನ ಕಾರ್ಯದರ್ಶಿಗಳಾದ ಆಘಾಸುಲ್ತಾನ್‌, ಸತೀಶ್‌, ವಿನಯ್‌ ನವಲಘಟ್ಟಿ, ಡಾ. ಮುದ್ದು ಗಂಗಾಧರ್‌, ಶಾಸಕ ವಿನಯ್‌ಕುಲಕರ್ಣಿ ಅವರ ಪತ್ನಿ ಶಿವಲೀಲಾ, ಶಾಸಕ ಎಂ.ವೈ. ಪಾಟೀಲ್‌ ಅವರ ಪುತ್ರ ಅರುಣ್‌ ಪಾಟೀಲ್‌, ದಾವಣಗೆರೆಯ ಜಿಲ್ಲಾಕಾಂಗ್ರೆಸ್‌‍ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಮಾಜಿ ಶಾಸಕ ರಾಮಪ್ಪ, ಕೆಪಿಸಿಸಿಯ ವಕ್ತಾರರಾದ ನಟರಾಜ್‌ಗೌಡ ಅವರುಗಳನ್ನು ನಿಗಮ ಮಂಡಳಿಗೆ ನೇಮಿಸಲು ಪಟ್ಟಿ ತಯಾರಾಗಿದೆ.

ಸಂಭನೀಯರ ಪಟ್ಟಿಯಲ್ಲಿ ಡಾ. ಶ್ರೀನಿವಾಸ್‌‍, ಬಸಂತಪ್ಪ ಹಾಲಿ ಶಾಸಕರಾಗಿದ್ದರೆ, ಶಾಸಕರ ಕುಟುಂಬದ ಸದಸ್ಯರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಕಳೆದ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾದ ನಿಕೇತ್‌ ರಾಜ್‌ ಮೌರ್ಯ, ಮುದ್ದು ಗಂಗಾಧರ್‌, ನಟರಾಜ್‌ ಗೌಡ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ದೊರೆಯುವ ಸಾಧ್ಯ ಇದೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಿದ್ದು, ಪಟ್ಟಿಗೆ ಬಹುತೇಕ ಸಹಮತ ವ್ಯಕ್ತವಾಗಿದೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಪಟ್ಟಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಬಹುತೇಕ ಸೊಮವಾರ ಅಥವಾ ಬುಧವಾರ ನೇಮಕಾತಿ ಆದೇಶಗಳು ಹೊರ ಬೀಳುವ ಸಾಧ್ಯತೆಗಳಿವೆ.

RELATED ARTICLES

Latest News