Sunday, November 24, 2024
Homeಜಿಲ್ಲಾ ಸುದ್ದಿಗಳು | District News17 ಕಾಂಗ್ರೆಸ್‍ ಅಭ್ಯರ್ಥಿಗಳ ಪಟ್ಟಿ ರೆಡಿ, ಬಾಕಿ 4 ಕ್ಷೇತ್ರಗಳಿಗೆ ಮತ್ತೊಂದು ಸುತ್ತಿನ ಮೀಟಿಂಗ್

17 ಕಾಂಗ್ರೆಸ್‍ ಅಭ್ಯರ್ಥಿಗಳ ಪಟ್ಟಿ ರೆಡಿ, ಬಾಕಿ 4 ಕ್ಷೇತ್ರಗಳಿಗೆ ಮತ್ತೊಂದು ಸುತ್ತಿನ ಮೀಟಿಂಗ್

ಬೆಂಗಳೂರು,ಮಾ.21- ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿ ಸಭೆ ಅನುಮೋದನೆ ನೀಡಿರುವ 17 ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು , ಬಾಕಿ ಇದ್ದ 4 ಕ್ಷೇತ್ರಗಳಿಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ.ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಅಂಗೀಕಾರ ಪಡೆದಿರುವ 17 ಮಂದಿ ಸಂಭವನೀಯರ ಪಟ್ಟಿಯಲ್ಲಿ ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜೊತೆಯಲ್ಲಿ ಕುಟುಂಬ ರಾಜಕಾರಣಕ್ಕೂ ಮಣೆ ಹಾಕಲಾಗಿದೆ.

ಲಿಂಗಾಯತ ಸಮುದಾಯದ 5, ಗೌಡ ಸಮುದಾಯಕ್ಕೆ 2, ಕುರುಬ, ಅಲ್ಪಸಂಖ್ಯಾತ, ಬಂಟ, ರೆಡ್ಡಿಸಮುದಾಯಗಳಿಗೆ ತಲಾ 1 ಸ್ಥಾನಗಳನ್ನು ನೀಡಲಾಗಿದೆ.ಎಸ್‍ಸಿ ಮೀಸಲು ಕ್ಷೇತ್ರದಲ್ಲಿ ಚಿತ್ರದುರ್ಗವನ್ನು ಎಡಗೈ ಸಮುದಾಯಕ್ಕೆ ನೀಡಲಾಗಿದೆ. ರಾಯಚೂರು ಎಸ್‍ಟಿ ಮೀಸಲು ಕ್ಷೇತ್ರಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ನಾಯಕ್‍ರನ್ನು ಕಣಕ್ಕಿಳಿಸಲಾಗುತ್ತಿದೆ. ಚಿಕ್ಕೋಡಿ ಸಾಮಾನ್ಯ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಅವರ ಹೆಸರು ಆಖೈರುಗೊಳ್ಳುವ ಮೂಲಕ ಪರಿಶಿಷ್ಟ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ.

ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಅವರನ್ನು ಲೆಕ್ಕಿಸದೆ ಸಂಯುಕ್ತ ಪಾಟೀಲ್‍ಗೆ ಮಣೆ ಹಾಕಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಸ್ಪರ್ಧೆ ಅನಿಶ್ಚಿತವಾಗಿರುವುದರಿಂದ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರು ಆಖೈರುಗೊಂಡಿದೆ. ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್‍ಗೆ ಮಣೆ ಹಾಕಲಾಗಿದೆ. ಉತ್ತರ ಕನ್ನಡ ಕ್ಷೇತ್ರಕ್ಕೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಹಾಗೂ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅಭ್ಯರ್ಥಿಯಾಗಲಿದ್ದಾರೆ.

ಹಿಂದುಳಿದ ವರ್ಗಗಳಿಗೆ ಈ ಬಾರಿ ಹೆಚ್ಚಿನ ಮಣೆ ಹಾಕದೇ ಇರುವುದು ಕಂಡುಬಂದಿದೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಬೀದರ್, ದಾವಣಗೆರೆ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ.ಈಗಾಗಲೇ ಪ್ರಕಟಿಸಲಾಗಿರುವ 7 ಕ್ಷೇತ್ರಗಳ ಪೈಕಿ ಶಿವಮೊಗ್ಗ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲಾಗಿತ್ತು.

ಎರಡನೇ ಹಂತದಲ್ಲಿನ ಸಂಭವನೀಯರ ಪಟ್ಟಿಯನ್ನು ಕಂಡು ಬಹಳಷ್ಟು ನಿಷ್ಟಾವಂತ ಕಾಂಗ್ರೆಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಲೋಕಸಭಾ ಚುನಾವಣೆಗಾಗಿ ಕೆಲವು ವರ್ಷಗಳಿಂದಲೂ ತಯಾರಿ ನಡೆಸಿದ್ದವರು ಕುಟುಂಬ ರಾಜಕಾರಣದ ಅಬ್ಬರದಲ್ಲಿ ಅವಕಾಶ ವಂಚಿತರಾಗಿದ್ದು, ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ.ಎರಡನೇ ಪಟ್ಟಿ ಅಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆ ಬಂಡಾಯದ ಕಿಡಿ ಹೊತ್ತಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ.

ಕೋಲಾರ, ಚಾಮರಾಜನಗರ, ಬಳ್ಳಾರಿ, ಚಿಕ್ಕಬಳ್ಳಾಪುರ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದ್ದು, ದೆಹಲಿಯಲ್ಲಿ ಹಗ್ಗಜಗ್ಗಾಟ, ಬಲಾಬಲ ಪ್ರದರ್ಶನ ಮುಂದುವರೆದಿದೆ.ಕೋಲಾರ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್‍ಗೆ ತಲೆನೋವಾಗಿ ಪರಿಣಮಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.

ಕುಟುಂಬಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಸಚಿವ ರಮೇಶ್‍ಕುಮಾರ್, ಹಾಲಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಕೊತ್ತನೂರು ಮಂಜುನಾಥ್ ಸೇರಿದಂತೆ ಅನೇಕರು ದೆಹಲಿಗೆ ಹೋಗಿ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ ವರಿಷ್ಠರು ಕೆ.ಎಚ್.ಮುನಿಯಪ್ಪ ಅವರಿಗೆ ಖುದ್ದು ನೀವು ಚುನಾವಣೆಗೆ ನಿಲ್ಲುವುದಾದರೆ ಯಾವುದೇ ತಕರಾರಿಲ್ಲ.

ಎಲ್ಲರಿಗೂ ಸಮಾಧಾನಪಡಿಸಿ ಅವಕಾಶ ಮಾಡಿಕೊಡುತ್ತೇವೆ. ಆದರೆ ಕುಟುಂಬಕ್ಕೆ ಈ ಬಾರಿ ಅವಕಾಶ ನೀಡಲಾಗುವುದಿಲ್ಲ. ನಿಮ್ಮ ಕುಟುಂಬದಿಂದ ನೀವು ಸಚಿವರಾಗಿದ್ದೀರಿ, ಮಗಳು ಶಾಸಕರಾಗಿದ್ದು, ನಿಗಮದಲ್ಲಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಪಸ್ವರ ತೆಗೆಯದೆ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದೆ ಎನ್ನಲಾಗಿದೆ.

ರಮೇಶ್‍ಕುಮಾರ್‍ರವರ ತಂಡ ಮುನಿಯಪ್ಪ ಅವರ ಕುಟುಂಬ ಹೊರತುಪಡಿಸಿ ಬೇರೆ ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದು ಹೇಳಿದ್ದು, ಜಿಲ್ಲಾ ರಾಜಕಾರಣದಲ್ಲಿ ಬಾಕಿ ಇರುವ ಬಿಕ್ಕಟ್ಟನ್ನು ಬಹಿರಂಗಗೊಳಿಸಿದೆ.ಚಾಮರಾಜನಗರದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ನನ್ನ ವಿಷಯ ಬಂದಾಗ ಮಾತ್ರ ಮಲತಾಯಿ ಧೋರಣೆ ಏಕೆ ಎಂದು ಹೈಕಮಾಂಡ್ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಪುತ್ರನಿಗೆ ಅವಕಾಶ ನೀಡದೇ ಸಾಮಾನ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಜೆಡಿಎಸ್, ಬಿಜೆಪಿ ಮೈತ್ರಿಯನ್ನು ಎದುರಿಸಬೇಕಾದರೆ ಸಚಿವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕುಟುಂಬ ರಾಜಕಾರಣದಿಂದ ಹೊರಬರಬೇಕು ಎಂದು ತಿಳಿಹೇಳಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಕ್ಷೇತ್ರದಲ್ಲಿ ಶಾಸಕ ತುಕಾರಾಂ ತಮ್ಮ ಪುತ್ರಿಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿರುವುದರಿಂದ ವಿ.ಎಸ್.ಉಗ್ರಪ್ಪ ಅವರ ಹೆಸರು ಕೊನೆಕ್ಷಣದಲ್ಲಿ ತಡೆಹಿಡಿಯಲ್ಪಟ್ಟಿದೆ.ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ತಮಗೆ ಅವಕಾಶ ನಿರಾಕರಿಸಿದರೆ ತಾವು ಸುಮ್ಮನಿರುವುದಿಲ್ಲ ಎಂದು ವೀರಪ್ಪ ಮೊಯ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹೀಗಾಗಿ ಯುವ ನಾಯಕ ರಕ್ಷಾ ರಾಮಯ್ಯ ಹೆಸರು ಅಂತಿಮ ಹಂತದಲ್ಲಿ ನೆನೆಗುದಿಗೆ ಬಿದ್ದಿದೆ. ಈ ನಾಲ್ಕೂ ಕ್ಷೇತ್ರಗಳಿಗೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿ ನಂತರ ಅಭ್ಯರ್ಥಿಗಳನ್ನು ಆಖೈರುಗೊಳಿಸುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಕ್ಷೇತ್ರ – ಸಂಭವನೀಯ ಅಭ್ಯರ್ಥಿ
ಚಿತ್ರದುರ್ಗ – ಚಂದ್ರಪ್ಪ
ರಾಯಚೂರು – ಕುಮಾರ್ ನಾಯಕ್
ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ
ಬಾಗಲಕೋಟೆ – ಸಂಯುಕ್ತ ಪಾಟೀಲ್
ಧಾರವಾಡ – ವಿನೋದ್ ಅಸೋಟಿ
ಕೊಪ್ಪಳ – ರಾಜಶೇಖರ್ ಹಿಟ್ನಾಳ್
ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
ಬೀದರ್ – ಸಾಗರ್ ಖಂಡ್ರೆ
ಮೈಸೂರು – ಎಂ.ಲಕ್ಷ್ಮಣ್
ದಕ್ಷಿಣ ಕನ್ನಡ – ಪದ್ಮರಾಜ್
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್
ಬೆಂಗಳೂರು ದಕ್ಷಿಣ – ಸೌಮ್ಯರೆಡ್ಡಿ
ಬೆಂಗಳೂರು ಕೇಂದ್ರ – ಮನ್ಸೂರ್ ಆಲಿಖಾನ್
ಬೆಂಗಳೂರು ಉತ್ತರ – ಪೆÇ್ರ.ರಾಜೀವ್‍ಗೌಡ
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್

RELATED ARTICLES

Latest News