Friday, January 31, 2025
Homeರಾಜ್ಯಸಾಲ ಪಡೆದವರು ಆತ್ಮಹತ್ಯೆಯಂತಹ ನಿರ್ಧಾರ ಮಾಡಬೇಡಿ : ಸಿಎಂ ಸಿದ್ದರಾಮಯ್ಯ ಮನವಿ

ಸಾಲ ಪಡೆದವರು ಆತ್ಮಹತ್ಯೆಯಂತಹ ನಿರ್ಧಾರ ಮಾಡಬೇಡಿ : ಸಿಎಂ ಸಿದ್ದರಾಮಯ್ಯ ಮನವಿ

Loan recipients should not take suicidal decisions: CM Siddaramaiah appeals

ಮೈಸೂರು,ಜ.31- ವಿಪರೀತ ಬಡ್ಡಿ ವಸೂಲಿ ಹಾಗೂ ಕಾನೂನು ಬಾಹಿರವಾಗಿ ಸಾಲ ವಸೂಲಿ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾಲ ಪಡೆದವರು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳು ಕೂಡ ಆರ್ಬಿಐನ ಅಧೀನದಲ್ಲಿದೆ. ಬಿಜೆಪಿಯವರು ಟೀಕೆ ಮಾಡುವ ಮುನ್ನ ಯೋಚನೆ ಮಾಡಬೇಕು ಎಂದು ತಿರುಗೇಟು ನೀಡಿದರು.

ಕೆಲವು ಕಡೆ ಹೊರಗುತ್ತಿಗೆಯ ಮೇಲೆ ಗೂಂಡಾಗಳನ್ನು, ರೌಡಿಗಳನ್ನು ಬಳಕೆ ಮಾಡಿ ಸಾಲ ವಸೂಲಿ ಮಾಡುತ್ತಿರುವುದು ಅನಧಿಕೃತವಾಗಿದೆ. ಇದು ಸರಿಯಲ್ಲ ಎಂದು ಹೇಳಿದರು.
ನಬಾರ್ಡ್ನಿಂದ ನೀಡಲಾಗುವ ಸಾಲದ ಮೊತ್ತದಲ್ಲೂ ಶೇ.58 ರಷ್ಟು ಕಡಿತ ಮಾಡಿದ್ದಾರೆ. ಅದನ್ನು ಸರಿಪಡಿಸಿ ಎಂದು ಹಲವು ಬಾರಿ ಪತ್ರ ಬರೆದಿದ್ದೇವೆ. ಅದಕ್ಕೂ ಸ್ಪಂದಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜನ ಎಲ್ಲಿ ಸಾಲ ಸಿಗುತ್ತದೋ ಅತ್ತ ವಾಲುತ್ತಾರೆ ಎಂದು ಮೈಕ್ರೋ ಫೈನಾನ್ಸ್ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗೆಂದ ಮಾತ್ರಕ್ಕೆ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಯ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಮಿತಿಮೀರಿದ ಬಡ್ಡಿ ವಸೂಲಿ, ಸಾಲ ವಸೂಲಾತಿಗಾಗಿ ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ರಾಜ್ಯಸರ್ಕಾರದಿಂದ ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ. ನೂತನ ಕಾಯ್ದೆ ಜಾರಿಗೆ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಡಬೇಕಾದ ನ್ಯಾಯಯುತ ಪಾಲನ್ನೇ ಕೊಡುವುದಿಲ್ಲ. ಈ ಹಿಂದೆ 2023-24ರ ಬಜೆಟ್ನಲ್ಲಿ ಭದ್ರಾಮೇಲ್ದಂಡೆಗೆ 5,300 ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಒಂದು ಪೈಸೆಯನ್ನೂ ನೀಡಿಲ್ಲ. ಯಾವುದೇ ಯೋಜನೆಗಳಿಗೂ ಹಣ ಕೊಟ್ಟಿಲ್ಲ. ಹೇಳಿದ್ದನ್ನೇ ಕೊಟ್ಟಿಲ್ಲ. ಇನ್ನು ಬಜೆಟ್ನಲ್ಲಿ ಹೊಸದಾಗಿ ಏನು ನಿರೀಕ್ಷೆ ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದರು.

ರಾಜ್ಯದಿಂದ ಕೇಂದ್ರಕ್ಕೆ 4.50 ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತಿದೆ. ನಮಗೆ ವಾಪಸ್ ಬರುತ್ತಿರುವುದು 60 ಸಾವಿರ ಕೋಟಿ ರೂ. ಮಾತ್ರ. ನಿರಂತರವಾಗಿ ನಮಗೆ ಅನ್ಯಾಯವಾಗುತ್ತಲೇ ಇದೆ.

ಕುಂಭಮೇಳ ಟೀಕಿಸುವುದು ಕಾಂಗ್ರೆಸ್ನ ಅಯೋಗ್ಯತನ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಜಗತ್ತಿಗೇ ಗೊತ್ತಿದೆ. ಇನ್ನು ಅವರ ಬಗ್ಗೆ ನಾನು ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಕುಂಭಮೇಳ ನಡೆಯುತ್ತಿರುವುದು ಬಿಜೆಪಿಯದೇ ಆಡಳಿತವಿರುವ ಉತ್ತರ ಪ್ರದೇಶದಲ್ಲಿ. ಕಾಲ್ತುಳಿತ ಆಗಿರುವುದು ಉತ್ತರ ಪ್ರದೇಶದಲ್ಲಿ. ಈ ದೃಷ್ಟಿಕೋನದಿಂದ ನೋಡಿದರೆ ಅಯೋಗ್ಯರು ನಾವೋ, ಅವರೋ ಎಂದು ಮರುಪ್ರಶ್ನಿಸಿದರು.ತಪ್ಪಾದಾಗ ಟೀಕಿಸಲು ಸ್ವಾತಂತ್ರ್ಯ ಇದೆ. ತಪ್ಪಾಗಿರುವುದನ್ನು ಪ್ರಶ್ನಿಸಲೇಬಾರದು ಎಂಬ ವಿಜಯೇಂದ್ರ ಅವರ ಅಭಿಪ್ರಾಯ ಬಾಲಿಶತನದ ಹೇಳಿಕೆ ಎಂದು ಲೇವಡಿ ಮಾಡಿದರು.

RELATED ARTICLES

Latest News