Tuesday, April 29, 2025
Homeರಾಷ್ಟ್ರೀಯ | Nationalಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಸ್ಥಳೀಯರ ಕೈವಾಡ ಬಹಿರಂಗ

ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಸ್ಥಳೀಯರ ಕೈವಾಡ ಬಹಿರಂಗ

Locals' involvement in Pahalgam terror attack revealed

ನವದೆಹಲಿ,ಏ.29-ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಸ್ಥಳೀಯರ ಕೈವಾಡ ಇರುವ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದವು. ಈ ಅನುಮಾನ ಇದೀಗ ಖಚಿತವಾಗತೊಡಗಿದೆ. ಪ್ರವಾಸಿಗನೊಬ್ಬನ ಜಿಪ್‌ಲೈನ್‌ ಸವಾರಿಯ ವಿಡಿಯೋದಲ್ಲಿ ಸ್ಥಳೀಯರ ಕೈವಾಡ ಇರುವುದು ಬಹಿರಂಗವಾಗಿದೆ.

ಉಗ್ರರ ದಾಳಿ ನಡುವೆ ಪ್ರವಾಸಿಗನೊಬ್ಬನನ್ನು ಜಿಪ್‌ಲೈನ್‌ ಸವಾರಿಗೆ ಕಳುಹಿಸಿದ ಆಪರೇಟರ್‌, ಅಲ್ಲಾಹು ಅಕ್ಬರ್‌ ಎಂದು 3 ಬಾರಿ ಘೋಷಣೆ ಕೂಗಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ.
ಗುಜರಾತ್‌ ಮೂಲದ ಪ್ರವಾಸಿಗರನ್ನು ಜಿಪ್‌ಲೈನ್‌ ಸವಾರಿಗೆ ಕಳುಹಿಸುವಾಗ ನಿರ್ವಾಹಕ ಮೂರು ಬಾರಿ ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದಾನೆ. ಬಳಿಕ ಗುಂಡಿನ ದಾಳಿ ಶುರುವಾಗಿರುವುದು ಕಂಡು ಬಂದಿದೆ.

ಜಿಪ್‌ಲೈನ್‌ ಮೂಲಕ ವಿಡಿಯೋ ಮಾಡುತ್ತಾ ಸಾಗಿರುವ ಪ್ರವಾಸಿಗೆ ಕೆಲ ಹೊತ್ತಿನಲ್ಲಿ ಉಗ್ರ ದಾಳಿಯ ಬಗ್ಗೆ ಅರಿವಾಗಿದೆ. ಜಿಪ್‌ಲೈನ್‌ ಸವಾರಿ ಅಂತ್ಯಗೊಂಡ ಬೆನ್ನಲ್ಲೇ ಛಂಗನೆ ಹಾರಿ ಕುಟುಂಬದತ್ತ ಧಾವಿಸಿದ್ದಾನೆ. ಬಳಿಕ ಒಂದೆಡೆ ಉಗ್ರರು ಹಂತ ಹಂತವಾಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪತ್ನಿ ಹಾಗೂ ಕುಟುಂಬವನ್ನು ಕರೆದುಕೊಂಡು ಓಡಲು ಶುರು ಮಾಡಿದ್ದಾನೆ.

ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ಪ್ರವಾಸಿಗ ಹೇಳಿದ್ದಾನೆ.

ಕಾಶ್ಮೀರಿ ಜಿಪ್‌ ಲೈನ್‌ ಆಪರೇಟರ್‌ ಬಗ್ಗೆ ನನಗೆ ಅನುಮಾನವಿದೆ. ಏಕೆಂದರೆ, ನಮ್ಮನ್ನು ಸವಾರಿಗೆ ಕಳುಹಿಸುವಾಗ ನಿರ್ವಾಹಕ ಮೂರು ಬಾರಿ ಅಲ್ಲಾಹು ಅಕ್ಬರ್‌ ಎಂದು ಕೂಗಿದ. ನಂತರ ಗುಂಡಿನ ದಾಳಿ ಶುರುವಾಗಿತ್ತು ಎಂದು ಪ್ರವಾಸಿಗ ರಿಶಿ ಭಟ್‌ ಅವರು ಹೇಳಿದ್ದಾರೆ.

ನನಗೂ ಮುನ್ನ 9 ಮಂದಿ ಸವಾರಿಗೆ ಹೋಗಿದ್ದರು. ಆ ವೇಳೆ ಆಪರೇಟರ್‌ ಒಂದು ಪದವನ್ನೂ ಮಾತನಾಡಿರಲಿಲ್ಲ. ನನ್ನ ಸವಾರಿ ಆರಂಭವಾಗುತ್ತಿದ್ದಂತೆಯೇ ಮೂರು ಬಾರಿ ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದ. ನಂತರ ಗುಂಡಿನ ದಾಳಿ ಶುರುವಾಗಿತ್ತು. ನನಗೆ ಆತನ ಮೇಲೆ ಅನುಮಾನವಿದೆ. ಆಪರೇಟರ್‌ ಕಾಶ್ಮೀರಿ ವ್ಯಕ್ತಿಯಂತೆಯೇ ಕಾಣಿಸುತ್ತಿದ್ದ.

ನನ್ನ ಸವಾರಿ ಆರಂಭವಾದ 20 ಸೆಕೆಂಡ್‌ ಬಳಿಕ ಉಗ್ರರ ದಾಳಿ ಬಗ್ಗೆ ಅರಿವಾಗಿತ್ತು. ಕೆಳಗಿದ್ದ ಜನರನ್ನು ಹತ್ಯೆ ಮಾಡಲಾಗುತ್ತಿತ್ತು. 5-6 ಮಂದಿಗೆ ಗುಂಡು ಹಾರಿಸಿದ್ದನ್ನು ನಾನು ನೋಡಿದೆ. ನಂತರ ಜಿಪ್‌ಲೈನ್‌ ಲಾಕ್‌ ತೆಗೆದು, ಕೆಳಗೆ ಜಿಗಿದು ಕುಟುಂಬದೊಂದಿಗೆ ಓಡಲು ಆರಂಭಿಸಿದ್ದೆ. ಸ್ಥಳದಲ್ಲಿ ಗುಂಡಿಯಂತಿದ್ದ ಜಾಗಗಳಲ್ಲಿ ಜನರು ಅಡಗಿಕೊಂಡಿದ್ದರು. ಆ ಜಾಗದಲ್ಲಿ ಸುಲಭವಾಗಿ ಯಾರನ್ನೂ ಹುಡುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾವೂ ಕೂಡ ಅಲ್ಲಿಯೇ ಅಡಗಿಕೊಂಡೆವು ಎಂದು ತಿಳಿಸಿದ್ದಾರೆ.

ನಮ್ಮ ಮುಂದಿದ್ದ ಕುಟುಂಬದ ಮುಂದೆ ಬಂದ ಉಗ್ರರು, ಅವರ ಧರ್ಮವನ್ನು ಕೇಳಿದ್ದರು. ನಂತರ ಅವರಿಗೆ ಗುಂಡಿಟ್ಟರು. ಈ ವೇಳೆ ನನ್ನ ಪತ್ನಿ ಹಾಗೂ ಮಗ ಭಯದಿಂದ ಕೂಗಾಡಲು ಶುರು ಮಾಡಿದ್ದರು. 8-10 ನಿಮಿಷ ಸುದೀರ್ಘ ಗುಂಡಿನ ದಾಳಿ ನಡೆಸಿದ ಉಗ್ರರು ಕೆಲ ನಿಮಿಷ ಸುಮ್ಮನಾದರು. ನಂತರ ಮತ್ತೆ ಗುಂಡಿನ ದಾಳಿ ನಡೆಸಿದರು.

ನಮ್ಮ ಕಣ್ಣೆದುರೇ 15-16 ಮಂದಿಯನ್ನು ಹತ್ಯೆ ಮಾಡಿದರು. ಮುಖ್ಯದ್ವಾರದ ಬಳಿ ತೆರಳಿದಾಗ ಸ್ಥಳೀಯರೆಲ್ಲರೂ ಸ್ಥಳದಿಂದ ಕಾಲ್ಕಿತ್ತಿರುವುದು ನಮ್ಮ ಗಮನಕ್ಕೆ ಬಂದಿತು. ದಾಳಿ ನಡೆದ 20-25 ನಿಮಿಷಗಳ ಬಳಿಕ ಸೇನಾಪಡೆಗಳು ಸ್ಥಳಕ್ಕೆ ಬಂದು ನಮಗೆ ರಕ್ಷಣೆ ನೀಡಿದವು. ಸೇನೆ ಬಂದ ಬಳಿಕವೇ ನಮಗೆ ಉಸಿರು ಬಿಡುವಂತಾಗಿತ್ತು. ಸೇನೆಗೆ ಬಹಳ ಧನ್ಯನಾಗಿದ್ದೇನೆಂದು ಹೇಳಿದ್ದಾರೆ.

RELATED ARTICLES

Latest News