ನವದೆಹಲಿ,ಜು.1- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ-20 ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾದ ಆಟಗಾರರಿಗೆ ಸಂಸತ್‌ನಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ದಿನದ ಕಲಾಪ ಆರಂಭವಾಗುತ್ತಿದ್ದಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜಸಭೆಯ ಸಭಾಪತಿ ಜಗದೀಶ್ ಧನ್ಕರ್ ಅವರುಗಳು ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಮಂಡಿಸಿದರು.
ಲೋಕಸಭೆಯಲ್ಲಿ ನಿರ್ಣಯದ ಮೇಲೆ ಮೊದಲು ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ವೆಸ್ಟ್ ಇಂಡೀಸ್ ನ ಬಾರ್ಬೊಡೋಸ್‌ನಲ್ಲಿ ನಡೆದ ಟಿ-20 ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಗೆದ್ದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಇಡೀ ಸದನ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು.
ಈ ವೇಳೆ ಲೋಕಸಭೆಯಲ್ಲಿ ಹಾಜರಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಟೀಂ ಇಂಡಿಯ ಆಟಗಾರರ ಸಾಧನೆಗೆ ಜೈಕಾರ ಹಾಕಿ ಚಪ್ಪಾಳೆ ತಟ್ಟಿ, ಮೇಜು ಕುಟ್ಟಿದರು.ನಿರ್ಣಯದ ಪರವಾಗಿ ಮಾಜಿ ಸಚಿವ ಹಾಗೂ ಸಂಸದ ಅನುರಾಗ್ ಠಾಕೂರ್ ಮಾತನಾಡಿದರು. ರೋಹಿತ್ ಶರ್ಮ ನೇತೃತ್ವದ ಟೀಂ ಇಂಡಿಯಾ 2ನೇ ಬಾರಿಗೆ ಐಸಿಸಿ ವಿಶ್ವಕಪ್ ಟಿ-20 ಪಂದ್ಯ ಗೆದ್ದು ದಾಖಲೆ ಬರೆದಿದೆ.
ಇದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದಲ್ಲಿ ಹೆಚ್ಚುವಂತೆ ಮಾಡಿದೆ ಎಂದು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ಇತ್ತ ರಾಜಸಭೆಯಲ್ಲೂ ಟೀಂ ಇಂಡಿಯಾದ ಆಟಗಾರರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭಾಪತಿ ಜಗದೀಶ್ ಧನ್ಕರ್ ಮಂಡಿಸಿದ ನಿರ್ಣಯಕ್ಕೆ ಪಕ್ಷಬೇಧ ಮರೆತು ಬೆಂಬಲ ಸೂಚಿಸಿದರು.