ಬೆಂಗಳೂರು,ಮೇ.2- ಇದೇ ಮೇ 7 ರಂದು ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರದ ಅಬ್ಬರ ಜೋರಾಗಿದ್ದರೆ, ಈಗಾಗಲೇ ಚುನಾವಣೆ ಮುಗಿದಿರುವ 14 ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದ ಜೊತೆಗೆ ಬೆಟ್ಟಿಂಗ್ ಭರಾಟೆಯೂ ಜೋರಾಗಿದೆ. ಚುನಾವಣೆ ಮುಗಿದ ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಈಗ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.
ಹಲವು ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಬೆಟ್ಟಿಂಗ್‍ಗಳ ಚರ್ಚೆಯೂ ಜೋರಾಗಿದೆ. ಜನರು ಇನ್ನೂ ಮತದಾನದ ಗುಂಗಿನಿಂದ ಹೊರಬಂದಂತಿಲ್ಲ. ಪಾರ್ಕ್, ಹೋಟೆಲ್, ಅಂಗಡಿ, ಬಸ್ ನಿಲ್ದಾಣ, ಆಸ್ಪತ್ರೆ, ಜನನಿಬಿಡ ಪ್ರದೇಶಗಳು ಎಲ್ಲಾ ಕಡೆಯೂ ಚುನಾವಣೆಯ ಮಾತುಗಳೇ, ಸೋಲು-ಗೆಲುವಿನ ಲೆಕ್ಕಾಚಾರಗಳೇ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಮೈತ್ರಿ ಅಭ್ಯರ್ಥಿಯ ಗೆಲುವು ಖಚಿತ ಎಂಬ ಚರ್ಚೆಗಳೇ ನಡೆದಿವೆ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ, ಹೆಚ್ಚು ಮತದಾನವಾಗಿರುವ ಕ್ಷೇತ್ರಗಳಲ್ಲಿ ಯಾವ ಪಕ್ಷ ಗೆಲ್ಲಲಿದೆ, ಯಾವ ಅಭ್ಯರ್ಥಿ ಈ ಬಾರಿ ಫೇವರಿಟ್ ಎಂಬ ಚರ್ಚೆಗಳ ಜೊತೆಗೆ ಜೂನ್ 4 ರಂದು ಪ್ರಕಟವಾಗುವ ಫಲಿತಾಂಶಕ್ಕೆ ಬಾಜಿ ಕಟ್ಟುವುದು ಕೂಡ ಕಂಡುಬರುತ್ತಿದೆ. ಯಾವ ಕ್ಷೇತ್ರಗಳಲ್ಲಿ ಜೋರಾಗಿ ಚುನಾವಣೆ ನಡೆದಿದೆ, ಯಾರ್ಯಾರು ಎಷ್ಟೆಷ್ಟು ಹಣ ಹಂಚಿದರು, ಎಲ್ಲೆಲ್ಲಿ ಕಡಿಮೆ ಮತದಾನ ಆಗಿದೆ, ಯಾರು ಗೆಲ್ಲಬಹುದು, ಯಾರು ಸೋಲಬಹುದು… ಇತ್ಯಾದಿ ಚರ್ಚೆಗಳು ಎಲ್ಲಾ ಕಡೆ ಕೇಳಿಬರುತ್ತಲೇ ಇವೆ.
ಬೆಳಿಗ್ಗೆ ವಾಕ್ ಮಾಡುವ ಪ್ರದೇಶಗಳಿಂದ ಹಿಡಿದು ರಾತ್ರಿ ನಿದ್ದೆ ಮಾಡುವವರೆಗೂ ಕೂಡ ರಾಜಕೀಯದ್ದೇ ಚರ್ಚೆ. ಹೈ ಪ್ರೊಫೈಲ್ ಕ್ಷೇತ್ರಗಳಾದ ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ, ತುಮಕೂರು ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿಯೇ ಸಾಗಿದೆ. ಜೊತೆಗೆ ಬಾಜಿ ಕಟ್ಟುವುದೂ ಕೂಡ ಹೆಚ್ಚಾಗಿ ಕಂಡುಬರುತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಅವರು ಗೆಲ್ಲುತ್ತಾರೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದರು. ಸುರೇಶ್ ಸೋಲಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಹಲವರದ್ದಾಗಿದೆ. ಈ ನಿಟ್ಟಿನಲ್ಲಿ ಬಹುತೇಕ ಕಡೆ ಚರ್ಚೆಗಳು ಸಾಗಿವೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ ರಾಜಕೀಯ ಲೆಕ್ಕಾಚಾರಗಳು, ಸೋಲು-ಗೆಲುವಿನ ಮಾತುಕತೆಗಳೇ ನಡೆಯುತ್ತಿವೆ. ಮಳೆ ಬಂದಿಲ್ಲ. ಬೇಸಿಗೆ ವಿಪರೀತವಾಗಿದೆ. ರೈತಾಪಿ ವರ್ಗ ಸೇರಿದಂತೆ ಜನರಿಗೆ ಕೆಲಸವೂ ಕಡಿಮೆ. ಈಗ ರಾಜಕೀಯ ಚರ್ಚೆಗೆ ವೇದಿಕೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಎನ್‍ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಇದ್ದು, ಭಾರೀ ಪ್ರಚಾರ, ಜಿದ್ದಾಜಿದ್ದಿನ ಪೈಪೋಟಿ ನಡೆಯಿತು.
ಬೃಹತ್ ಸಮಾವೇಶಗಳು, ರೋಡ್ ಶೋ, ರ್ಯಾಲಿಗಳ ಮೂಲಕ ಶಕ್ತಿ ಪ್ರದರ್ಶನ ಮಾಡಲಾಯಿತು. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್‍ನ ಭಾರೀ ಸಮಾವೇಶಗಳು ನಡೆದವು. ಹಲವು ಪಕ್ಷೇತರರು ಕಣದಲ್ಲಿ ಉಳಿದರೆ ಇನ್ನೂ ಕೆಲವರು ಚುನಾವಣೆಗೂ ಮುನ್ನವೇ ಕಣದಿಂದ ಹಿಂದೆ ಸರಿದರು. ಹೀಗಾಗಿ ಚುನಾವಣೆಯಲ್ಲಿ ಎನ್‍ಡಿಎ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತು.
ಈ ನೇರ ಸ್ಪರ್ಧೆಯಲ್ಲಿ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ತೀವ್ರಗೊಂಡಿದೆ. ರಾಜಕೀಯ ಲೆಕ್ಕಾಚಾರಗಳು ಬಿರುಸಾಗಿವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಾರ್, ಕ್ಲಬ್, ಹೋಟೆಲ್‍ಗಳಲ್ಲಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ. ಫಲಿತಾಂಶ ಪ್ರಕಟವಾಗಲು ಇನ್ನೂ 32 ದಿನ ಬಾಕಿ ಇರುವಂತೆಯೇ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸುಗೊಂಡಿರುವುದರ ಜೊತೆಗೆ ತಮ್ಮತಮ್ಮ ಅಭ್ಯರ್ಥಿಗಳ ಗೆಲುವಿನ ವಿಶ್ವಾಸದ ಬಗ್ಗೆ ಬೆಂಬಲಿಗರು, ಕಾರ್ಯಕರ್ತರು ಬಾಜಿ ಕಟ್ಟುವುದೂ ಕೂಡ ಹೆಚ್ಚಾಗುತ್ತಿದೆ.