Friday, November 22, 2024
Homeರಾಜ್ಯಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭವನೀಯರ ಪಟ್ಟಿ ರವಾನೆ, ವಲಸಿಗರಿಗೆ ಮಣೆ..!

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭವನೀಯರ ಪಟ್ಟಿ ರವಾನೆ, ವಲಸಿಗರಿಗೆ ಮಣೆ..!

ಬೆಂಗಳೂರು,ಮಾ.7- ಆಪರೇಷನ್ ಕಮಲದಿಂದ ಬಿಜೆಪಿ ಸೇರಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದ ಡಾ.ಸುಧಾಕರ್, ಶಿವರಾಂ ಹೆಬ್ಬಾರ್ ಸೇರಿದಂತೆ ಐದು ಮಂದಿ ವಲಸಿಗರನ್ನೊಳಗೊಂಡು ಕಾಂಗ್ರೆಸ್ ಸಂಭವನೀಯರ ಪಟ್ಟಿಯನ್ನು ಹೈಕಮಾಂಡ್‍ಗೆ ರವಾನಿಸಿದೆ. ಇದರಲ್ಲಿ ಸುಮಾರು 15 ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರಕ್ಕೆ ಹಾಲಿ ಸಂಸದ ಡಿ.ಕೆ.ಸುರೇಶ್ ಮರುಸ್ಪರ್ಧೆ ಮಾಡಲಿದ್ದಾರೆ. ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹೆಸರಿನ ಜೊತೆಗೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೆಸರು ಪ್ರಬಲವಾಗಿ ಕೇಳಿಬಂದಿದೆ.

ಮಂಡ್ಯ ಕ್ಷೇತ್ರಕ್ಕೆ ಸ್ಥಳೀಯ ಕೆಲ ಮುಖಂಡರ ವಿರೋಧದ ನಡುವೆಯೂ ಉದ್ಯಮಿ ಸ್ಟಾರ್ ಚಂದ್ರು ಕಣಕ್ಕಿಳಿ ಯುವುದು ಖಚಿತವಾಗಿದೆ. ಕಲ್ಪತರು ನಾಡು ತುಮಕೂರಿಗೆ ಕಳೆದ ವಾರವಷ್ಟೇ ಬಿಜೆಪಿಯಿಂದ ವಲಸೆ ಬಂದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಟಿ.ಬಿ. ಜಯಚಂದ್ರಅವರು ತಮ್ಮ ಪುತ್ರ ಸಂತೋಷ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವ ನಾಯಕ ನಿಖಿಲ್ ರಾಜ್ ಮೌರ್ಯ ಅವರ ಪರವಾದ ಒಲವು ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಹಿರಿಯ ನಾಯಕ ವೀರಪ್ಪ ಮೊಯ್ಲಿ ಅದೇ ಕ್ಷೇತ್ರದಿಂದ ಮತ್ತೆ ಸ್ರ್ಪಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮೊದಲು ಜಿ-23 ಗುಂಪಿನಲ್ಲಿ ಸೇರಿಕೊಂಡು ರಾಹುಲ್ ಗಾಂಧಿ ವಿರುದ್ಧ ಬಂಡಾಯದ ಕಹಳೆ ಊದಿದ್ದರು ಎಂಬ ಆಕ್ಷೇಪಗಳಿವೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಆರ್.ಸೀತಾರಾಮ್ ಅವರ ಪುತ್ರ ಹಾಗೂ ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸುವ ಉಮೇದಿನಲ್ಲಿದ್ದಾರೆ.

ಇತ್ತ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಬಿಡಿಎ ಅಧ್ಯಕ್ಷರೂ ಆಗಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಅವರ ಹೆಸರು ಕೇಳಿಬರುತ್ತಿದೆ. ಈ ಕ್ಷೇತ್ರದಲ್ಲಿ ಹ್ಯಾರಿಸ್ ಜಯ ಗಳಿಸಿದ್ದಾದರೆ, ತೆರವಾಗುವ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲ್ಪಾಡ್ ಅಧ್ಯಕ್ಷರಾಗಲಿದ್ದಾರೆ ಎಂಬ ಆಂತರಿಕ ಚರ್ಚೆಗಳಿವೆ. ಡಿ.ಕೆ.ಶಿವಕುಮಾರ್‍ರವರು ನಲ್ಪಾಡ್ ಬೆಂಬಲಕ್ಕಿದ್ದಾರೆ. ಅತ್ತ ಚಿಕ್ಕಬಳ್ಳಾಪುರ ಕ್ಷೇತ್ರ ರಕ್ಷಾ ರಾಮಯ್ಯ ಅವರಿಗೆ ಸಿಕ್ಕರೆ, ಬೆಂಗಳೂರು ಕೇಂದ್ರಕ್ಕೆ ಹ್ಯಾರಿಸ್‍ರವರಿಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರ ಹಂಚಿಕೆ ರಾಜಕಾರಣದ ಮೂಲಕ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎನ್ನಲಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಗೆಲುವು ಕಂಡರೆ ಅವರು ಹಾಲಿ ಪ್ರತಿನಿಧಿಸುತ್ತಿರುವ ದೇವನಹಳ್ಳಿ ಕ್ಷೇತ್ರಕ್ಕೆ ಮುನಿಯಪ್ಪ ಅವರ ಕುಟುಂಬದ ಸದಸ್ಯರಿಗೆ ವಿಧಾನಸಭೆಯಲ್ಲಿ ಟಿಕೆಟ್ ನೀಡಬೇಕು ಎಂಬ ಷರತ್ತಿದೆ.

ಗೆಲುವಿನ ದೃಷ್ಟಿಯಿಂದ ಸಂಪುಟದ ಸಚಿವರನ್ನು ಕಣಕ್ಕಿಳಿಸುವುದು ಕಾಂಗ್ರೆಸ್‍ನ ಒತ್ತಾಸೆಯಾಗಿದ್ದರೂ ಕೋಲಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಆಪ್ತ ಡಾ.ಬಿ.ಸಿ.ಮುದ್ದು ಗಂಗಾಧರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಕೈಗೆ ಬಂದಿದ್ದ ಬಿ-ಫಾರಂ ಅನ್ನು ಮಧು ಗಂಗಾಧರ್ ತ್ಯಾಗ ಮಾಡಿ ಪಕ್ಷದ ಶಿಸ್ತಿನ ಸಿಪಾಯಿ ಎನಿಸಿಕೊಂಡಿದ್ದರು. ಆ ನಿಷ್ಠೆಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂಬ ಚರ್ಚೆಗಳಿವೆ.

ಬಿಜೆಪಿಯಲ್ಲಿರುವ ಡಾ.ಸುಧಾಕರ್ ಅವರ ಹೆಸರು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾಗೂ ಶಾಸಕ ಶಿವರಾಂ ಹೆಬ್ಬಾರ್ ಹೆಸರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಪ್ರಬಲವಾಗಿ ಕೇಳಿಬಂದಿವೆ. ಈ ಇಬ್ಬರೂ ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ಕೊನೇ ಕ್ಷಣದಲ್ಲಿ ಶಿವರಾಂ ಹೆಬ್ಬಾರ್ ರಾಜೀನಾಮೆ ನೀಡಿ ಬಿಜೆಪಿ ಸೇರಬಹುದು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಉತ್ತರ ಕನ್ನಡ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

ಡಾ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಅವಕಾಶ ಗಿಟ್ಟದಿದ್ದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರಕ್ಕೆ ಪ್ರೊ.ರಾಜೀವ್‍ಗೌಡ, ಮಾಜಿ ಎಂಎಲ್‍ಸಿ ನಾರಾಯಣಸ್ವಾಮಿ ಕೂಡ ಲಾಬಿ ನಡೆಸುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ , ಶಿವಮೊಗ್ಗಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್, ದಾವಣಗೆರೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ, ಚಿತ್ರದುರ್ಗಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಬೀದರ್‍ಗೆ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಜಯಪುರ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜು ಅಲಗೂರು, ಹಾಸನಕ್ಕೆ ಶ್ರೇಯಸ್ ಪಟೇಲ್ ಹೆಸರುಗಳಿವೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸುೀಧಿರ್ ಮುರೋಳಿಯವರಿಗೆ ಟಿಕೆಟ್ ನೀಡಬೇಕೆಂದು ಎರಡೂ ಜಿಲ್ಲೆಗಳ ನಾಯಕರು ಮೊನ್ನೆ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಹಿಂದುಳಿದ ವರ್ಗಗಳ ಆಯೋಗದ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಚಾಲ್ತಿಯಲ್ಲಿದೆ.ಹಾವೇರಿಗೆ ಮಾಜಿ ಶಾಸಕ ಡಿ.ಆರ್. ಪಾಟೀಲ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ವಿಧಾನಪರಿಷತ್ ಸದಸ್ಯ ಸಲೀಂ ಅಹಮ್ಮದ್ ಹೆಸರು ಕೇಳಿಬರುತ್ತಿದೆ.

ಬಳ್ಳಾರಿ ಕ್ಷೇತ್ರಕ್ಕೆ ಸಚಿವ ಬಿ.ನಾಗೇಂದ್ರ ಅವರನ್ನು ಕಣಕ್ಕಿಳಿಸುವ ಚರ್ಚೆಗಳಿದ್ದು, ಶಾಸಕ ತುಕಾರಾಂ ಅವರ ಪುತ್ರಿ ಚೈತನ್ಯ ಸೌಪರ್ಣಿಕ ಮತ್ತು ಮಾಜಿ ಸಂಸದ ಉಗ್ರಪ್ಪ ಅವರ ಹೆಸರು ಚಾಲ್ತಿಯಲ್ಲಿವೆ. ಬಾಗಲಕೋಟೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ್ ಅಥವಾ ಮಾಜಿ ಶಾಸಕ ಆನಂದ ನ್ಯಾಮೇಗೌಡ, ದಕ್ಷಿಣ ಕನ್ನಡ ಕ್ಷೇತ್ರಕ್ಕೆ ವಿನಯ್‍ಕುಮಾರ್ ಸೊರಕೆ ಅಥವಾ ಪದ್ಮರಾಜ್, ರಾಯಚೂರು ಕ್ಷೇತ್ರಕ್ಕೆ ಕುಮಾರ್‍ನಾಯಕ್ ಅಥವಾ ರವಿ ಪಾಟೀಲ್ ಕಣಕ್ಕಿಳಿಯುವ ನಿರೀಕ್ಷೆಗಳಿವೆ.

ಚಾಮರಾಜನಗರ ಕ್ಷೇತ್ರಕ್ಕೆ ಸಚಿವ
ಎಚ್.ಸಿ.ಮಹದೇವಪ್ಪ ತಮ್ಮ ಪುತ್ರ ಸುನಿಲ್ ಬೋಸ್‍ರನ್ನು ಕಣಕ್ಕಿಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಕಲಬುರ್ಗಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ರ್ಪಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸದ ಹಿನ್ನೆಲೆಯಲ್ಲಿ, ಅವರ ಅಳಿಯ ರಾಧಾಕೃಷ್ಣರ ಹೆಸರು ಚಾಲ್ತಿಯಲ್ಲಿದೆ. ಕೊಪ್ಪಳ ಕ್ಷೇತ್ರಕ್ಕೆ ಅಮರೇಗೌಡ ಬಯ್ಯಾಪುರ ಅಥವಾ ರಾಜಶೇಖರ್ ಹಿಟ್ನಾಳ್ ಅಭ್ಯರ್ಥಿಗಳಾಗಲಿದ್ದಾರೆ. ಸಂಭವನೀಯ ಪಟ್ಟಿಯಲ್ಲಿ ಬಹಳಷ್ಟು ಮಂದಿ ವಲಸಿಗರ ಹೆಸರುಗಳಿದ್ದು, ಪರಸ್ಪರ ಕುಟುಂಬದ ಸದಸ್ಯರೇ ಹೆಚ್ಚಿನ ಲಾಬಿ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು ಗ್ರಾಮಾಂತರ : ಡಿ.ಕೆ.ಸುರೇಶ್
ಮೈಸೂರು : ಎಂ ಲಕ್ಷ್ಮಣ,
ಮಂಡ್ಯ : ಸ್ಟಾರ್ ಚಂದ್ರು(ವೆಂಕಟರಮಣಗೌಡ)
ತುಮಕೂರು:ಎಸ್.ಪಿ. ಮುದ್ದಹನುಮೇಗೌಡ,
ಚಿಕ್ಕಬಳ್ಳಾಪುರ : ರಕ್ಷಾ ರಾಮಯ್ಯ/ವೀರಪ್ಪಮೊಯ್ಲಿ
ಕೋಲಾರ : ಕೆ.ಎಚ್.ಮುನಿಯಪ್ಪ/ಡಾ.ಬಿ.ಸಿ.ಮುದ್ದುಗಂಗಾಧರ್
ಬೆಂಗಳೂರು ಕೇಂದ್ರ : ಎನ್.ಎ.ಹ್ಯಾರಿಸ್
ಬೆಂಗಳೂರು ಉತ್ತರ : ಪ್ರೊ.ರಾಜೀವ್‍ಗೌಡ/ ಕುಸುಮ/ಡಾ.ಸುಧಾಕರ್
ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ
ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್/ಶಿವರಾಮ್ ಹೆಬ್ಬಾರ್
ಚಾಮರಾಜನಗರ : ಸಚಿವ ಡಾ.ಎಚ್.ಸಿ. ಮಹದೇವಪ್ಪ/ಸುನೀಲ್ ಬೋಸ್
ಹಾಸನ : ಶ್ರೇಯಸ್ ಪಟೇಲ್
ಉಡುಪಿ-ಚಿಕ್ಕಮಗಳೂರು : ಸುೀಧಿರ್ ಮುರೋಳಿ/ಜಯಪ್ರಕಾಶ ಹೆಗ್ಡೆ
ಶಿವಮೊಗ್ಗ : ಗೀತಾ ಶಿವರಾಜಕುಮಾರ್
ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ/ ವಿನಯ್ ಕುಮಾರ್
ಚಿತ್ರದುರ್ಗ : ಬಿ.ಎನ್.ಚಂದ್ರಪ್ಪ
ಹಾವೇರಿ : ಡಿ.ಆರ್.ಪಾಟೀಲ/ ಸಲೀಂ ಅಹಮದ್
ವಿಜಯಪುರ :ರಾಜು ಆಲಗೂರ
ಬೀದರ್ : ರಾಜಶೇಖರ ಪಾಟೀಲ್
ಬಳ್ಳಾರಿ : ಸಚಿವ ಬಿ.ನಾಗೇಂದ್ರ/ ಚೈತನ್ಯ ಸೌಪರ್ಣಿಕ
ಬಾಗಲಕೋಟೆ : ಆನಂದ ನ್ಯಾಮಗೌಡ/ ವೀಣಾ ಕಾಶಪ್ಪನವರ್
ದಕ್ಷಿಣ ಕನ್ನಡ : ವಿನಯ್ ಕುಮಾರ್ ಸೊರಕೆ/ ಪದ್ಮರಾಜ್
ರಾಯಚೂರು : ಕುಮಾರ್ ನಾಯ್ಕ /ರವಿ ಪಾಟೀಲ್ ನಾಯ್ಕ
ಕಲಬುರಗಿ : ಮಲ್ಲಿಕಾರ್ಜುನ ಖರ್ಗೆ/ರಾಧಾಕೃಷ್ಣ
ಕೊಪ್ಪಳ : ಅಮರೇಗೌಡ ಬಯ್ಯಾಪುರ / ರಾಜಶೇಖರ ಹಿಟ್ನಾಳ್

RELATED ARTICLES

Latest News