ಬೆಂಗಳೂರು, ಜೂ.2- ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯುವುದರಿಂದ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕಾ ಕೇಂದ್ರಗಳಿವೆ. ಪ್ರತಿಯೊಂದು ಕೇಂದ್ರದಲ್ಲೂ ಸೂಕ್ತ ಭದ್ರತೆ ಮಾಡಲಾಗಿದೆ ಎಂದು ವಿವರಿಸಿದರು.
ಮತದಾನ ಮುಗಿದ ನಂತರ ಆಯಾ ಕ್ಷೇತ್ರದ ಎಲ್ಲ ಮತಯಂತ್ರಗಳನ್ನೂ ಮತ ಎಣಿಕಾ ಕೇಂದ್ರಕ್ಕೆ ತಂದಿಡಲಾಗಿದ್ದು, ಸ್ಥಳೀಯ ಪೊಲೀಸರ ಜತೆ ಕೇಂದ್ರ ಪಡೆಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಒಂದು ಮತ ಎಣಿಕಾ ಕೇಂದ್ರಕ್ಕೆ ಒಬ್ಬರು ಡಿಸಿಪಿ, ಮೂರು ಮಂದಿ ಎಸಿಪಿಗಳು, ಐದು ಮಂದಿ ಇನ್‌್ಸಪೆಕ್ಟರ್‌ಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ.
ಮಂಗಳವಾರ ನಗರದ ಎಲ್ಲ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಗಸ್ತಿನಲ್ಲಿರುತ್ತಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದರು.