Friday, November 22, 2024
Homeರಾಜ್ಯBREAKING : ಲೋಕಸಭೆ ಚುನಾವಣೆ-ರಾಜ್ಯದಲ್ಲಿ ಸರಾಸರಿ ಶೇ.70ರಷ್ಟು ಮತದಾನ

BREAKING : ಲೋಕಸಭೆ ಚುನಾವಣೆ-ರಾಜ್ಯದಲ್ಲಿ ಸರಾಸರಿ ಶೇ.70ರಷ್ಟು ಮತದಾನ

ಬೆಂಗಳೂರು, ಏ.26- ದೇಶದ ಭವಿಷ್ಯದ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಸರಾಸರಿ ಶೇ.70ರಷ್ಟು ಮತದಾನವಾಗಿದೆ.

ಮಂಡ್ಯ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಪ್ರಮಾಣದ ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಎಂದಿನಂತೆ ರಾಜಧಾನಿ ಬೆಂಗಳೂರಿನ ಮತದಾರರಲ್ಲಿ ನಿರುತ್ಸಾಹ ಕಂಡುಬಂದಿದ್ದು, ಮತದಾನದ ಪ್ರಮಾಣ ನಿರೀಕ್ಷೆಯಂತೆ ಏರಿಕೆ ಆಗಿಲ್ಲ.ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡುಬಂತು.

ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ. ಆರಂಭದಲ್ಲಿ ಕೈಕೊಟ್ಟ ಮತಯಂತ್ರ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪದಂತಹ ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ಈವರೆಗೆ ನಡೆದಿಲ್ಲ.

ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸುತ್ತಿದ್ದುದು ಕಂಡುಬಂತು. ಮಧ್ಯಾಹ್ನ ಬಿರು ಬಿಸಿಲು ಹೆಚ್ಚಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು.ಮತಗಟ್ಟೆಗಳಿಗೆ ಹೆಚ್ಚಾಗಿ ಮಹಿಳೆಯರು ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.

ಯುವ ಮತದಾರರು, ನವಮತದಾರರಲ್ಲಿ ಉತ್ಸಾಹ ಹೆಚ್ಚಾಗಿರುವುದು ಹಲವೆಡೆ ಕಂಡುಬಂತು.ರಾಜಕಾರಣಿಗಳು, ಚಲನಚಿತ್ರ ನಟ, ನಟಿಯರು, ಖ್ಯಾತ ಕ್ರಿಕೆಟ್‌ ಪಟುಗಳು, ಕಿರುತೆರೆ ಕಲಾವಿದರು ಸೇರಿದಂತೆ ವಿವಿಧ ಗಣ್ಯರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿ ಗಮನ ಸೆಳೆದರು.

ಹೈವೋಲ್ಟೇಜ್‌ ಕ್ಷೇತ್ರಗಳಾದ ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ ಸೇರಿದಂತೆ 14 ಕ್ಷೇತ್ರಗಳಿಗೂ ಸೂಕ್ತ ಭದ್ರತೆ ಒದಗಿಸಲಾಗಿದೆ. 70 ಕಂಪನಿ ಅರೆಸೇನಾ ಪಡೆ, ಡಿಎಆರ್‌ ಪ್ಲಟೂನ್‌, ಸಿಎಆರ್‌ ಮತ್ತು ಕೆಎಸ್‌‍ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಹೆಡ್‌ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ.

ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಳ್ಳಿ ಗ್ರಾಮದ ಜನರು ಮೂಲಭೂತ ಸೌಕರ್ಯ ಕೊರತೆ ಆರೋಪಿಸಿ ಮತದಾನ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಕೂಡ ನಡೆದಿದೆ.ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆಗೆ ಬೆಳಗ್ಗೆ 10 ಗಂಟೆಯಾದರೂ ಯಾವುದೇ ಮತದಾರರು ಬಂದಿರಲಿಲ್ಲ.

ಗ್ರಾಮದಲ್ಲಿ ಬಿಕೋ ಎನ್ನುವ ವಾತಾವರಣ ಕಂಡುಬಂದಿತ್ತು. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ತಮ ಬೆಂಬಲಿಗರ ಜೊತೆ ಮತಗಟ್ಟೆಗೆ ಆಗಮಿಸಿದ್ದರು ಎಂದು ಆಕ್ಷೇಪ ವ್ಯಕ್ತ ಪಡಿಸಿ ಬಿಜೆಪಿ-ಜೆಡಿಎಸ್‌‍ ಕಾರ್ಯಕರ್ತರು ಕಾಂಗ್ರೆಸ್‌‍ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೆ,ಕನಕಪುರದಲ್ಲಿ ಕಾಂಗ್ರೆಸ್‌‍ ಕಾರ್ಯಕರ್ತರು ಮತಗಟ್ಟೆ ಬಳಿ ಗಿಫ್‌್ಟ ಕೂಪನ್‌ ಹಂಚುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್‌‍-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಮೇ.7 ಕ್ಕೆ 14 ಕ್ಷೇತ್ರಗಳಿಗೆ 2ನೇ ಹಂತದ ಚುನಾವಣೆ ನಡೆಯಲಿದ್ದು, ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ.

RELATED ARTICLES

Latest News