ಬೆಂಗಳೂರು,ಏ.26- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ, ನಿಗದಿತ ಸಮಯದಂತೆ ಬೆಳಿಗ್ಗೆ 7 ಗಂಟೆಯಿಂದಲೇ 14 ಕ್ಷೇತ್ರಗಳ 30,602 ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದೆ. ಶಾಂತಿಯುತ ಮುಕ್ತ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಮತದಾರರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಬಹುತೇಕ ಕಡೆಗಳಲ್ಲಿ ಕಂಡುಬಂದಿದೆ.
ವಿಶೇಷ ಮತಗಟ್ಟೆಗಳಲ್ಲೂ ಕೂಡ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಕಚೇರಿ ಪ್ರಕಟಣೆ ತಿಳಿಸಿದೆ.ಯುವ ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸುತ್ತಿರುವ ಮಾಹಿತಿ ಬಂದಿದೆ. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದ್ದಾರೆ. ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲೂ ಕೂಡ ಅಹಿತಕರ ಘಟನೆ ನಡೆದಿಲ್ಲ. ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ ನೆರಳು, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲೂ ವೆಬ್‌ಕಾಸ್ಟಿಂಗ್ ಮಾಡಲಾಗುತ್ತಿದೆ. ಒಟ್ಟಾರೆ 19,701 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಹಾಗೂ 1370 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಕ್ತ ಭದ್ರತೆಯನ್ನು ಮತಗಟ್ಟೆಗಳಲ್ಲಿ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿ ಕನ್ನಡಲ್ಲೇ ಟ್ವೀಟ್ ಮನವಿ :
ಲೋಕಸಭೆ ಚುಣಾವಣೆಗೆ ಇಂದು ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ದಾಖಲೆಯ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ,ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ.ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ ಕೋರುತ್ತೇನೆ. ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (LIVE UPDATES)
ಮತದಾನ ಮಾಡಿದ ಶ್ರೀ ರಂಭಾಪುರಿ ಜಗದ್ಗುರು ;
ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು) , ಏ.26-ಲೋಕಸಭಾ ಚುನಾವಣೆಯ ಅಂಗವಾಗಿ ಇಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಮತ ಚಲಾಯಿಸಿದರು.
ಮತದಾನದ ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಯಶಸ್ವಿಗಾಗಿ ಪ್ರತಿಯೊಬ್ಬರೂ ಕೂಡಾ ಮತ ಚಲಾವಣೆ ಮಾಡುವುದು ಅವಶ್ಯಕ.
ಮತದಾನ ಸಂವಿಧಾನ ನೀಡಿದ ಉನ್ನತ ಹಕ್ಕು ಎಂಬುದನ್ನು ಮರೆಯಬಾರದು. ರಾಜ್ಯದಲ್ಲಿ ಎರಡು ಹಂತದ ಮತದಾನ ನಡೆಯುತ್ತಿದ್ದು ಮೊದಲ ಹಂತದ ಮತದಾನದಲ್ಲಿ ತಾವು ಮತ ಚಲಾಯಿಸಿದ್ದೇವೆ. ಸುಭದ್ರ ಮತ್ತು ಸದೃಢ ಸರ್ಕಾರದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು.
0
ಮತದಾನ ಮಾಡಿ ಮಾದರಿಯಾದ 91 ವರ್ಷದ ಮಂಜುನಾಥ್
ಅರಸೀಕೆರೆ, ಏ.26- ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ನಗರದ 13ನೇ ವಾರ್ಡಿನಲ್ಲಿ ವಾಸವಿರುವ 91 ವರ್ಷದ ಮಂಜುನಾಥ್ ರಾವ್ ಮತಗಟ್ಟೆ ಸಂಖ್ಯೆ 132 ರಲ್ಲಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಯುವ ಮತದಾರರಿಗೆ ಮತದಾನದ ಮಹತ್ವ ಸಾರಿದರು.
ಬಾನಂಗಳದಲ್ಲಿ ಸೂರ್ಯ ತನ್ನ ದಿನಚರಿ ಆರಂಭಿಸುತ್ತಿದ್ದಂತೆಯೇ ಇತ್ತ ಚುನಾವಣಾ ಅಧಿ ಕಾರಿಗಳು ಸಹ ತಮ್ಮ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಿದರು ಈ ವೇಳೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಮಂಜುನಾಥರಾಯರು ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಮಾಡುವ ಮೂಲಕ ಮತದಾನದ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದೊಂದು ಜಾತಿ ಧರ್ಮದವರಿಗೆ ತಮ್ಮದೇ ಆದ ರೀತಿಯಲ್ಲಿ ಹಬ್ಬ-ಹರಿದಿನಗಳನ್ನು ಆಚರಣೆ ಮಾಡುವ ಸಂಪ್ರದಾಯವಿರುತ್ತದೆ ಆದರೆ ದೇಶದಲ್ಲಿ ವಾಸ ಮಾಡುತ್ತಿರುವ ಹಿಂದೂ, ಮುಸ್ಲಿಂ, ಕ್ರೈಸ್ತ , ಸಿಖ್‌್ಖ , ಜೈನ ಹೀಗೆ ಯಾವುದೇ ಧರ್ಮವಿರಲಿ, ಜಾತಿ ಇರಲಿ ಅವರೆಲ್ಲರೂ ಒಗ್ಗಟ್ಟಿನಿಂದ ಮಾಡಬಹುದಾದ ಹಬ್ಬವೆಂದರೆ ಅದು ಪ್ರಜಾಪ್ರಭುತ್ವದ ಹಬ್ಬ ಮತದಾನವೆಂಬ ಪೂಜೆ.
ಈ ಹಬ್ಬವನ್ನು ಎಲ್ಲರೂ ತಪ್ಪದೇ ಆಚರಣೆ ಮಾಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ಚಿಂತನೆಯೊಂದಿಗೆ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ರಾಜ್ಯ ಹಾಗೂ ದೇಶದ ಪ್ರಗತಿಗೆ ಕಾರಣೀಭೂತರಾಗುವಂತೆ ಮನವಿ ಮಾಡಿದರು.
ಪ್ರತಿಜ್ಞೆ : ಸಂವಿಧಾನ ನನಗೆ ಕೊಟ್ಟಿರುವ ಮತದಾನದ ಹಕ್ಕನ್ನು ದೇಶದ ಅತ್ಯಂತ ಜವಾಬ್ದಾರಿಯುತ ನಾಗರಿಕನಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ತಪ್ಪದೇ ಪಾಲ್ಗೊಂಡು ಮತದಾನ ಮಾಡುವ ಪ್ರತಿಜ್ಞೆ ಮಾಡಿರುವುದಲ್ಲದೆ ಪಾಲಿಸುತ್ತಾ ಬಂದಿದ್ದೇನೆ. ಅದೇ ರೀತಿ ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
0