ನವದೆಹಲಿ,ಮೇ24- ಎಂಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಹಲವು ರಾಜಕೀಯ ಪಕ್ಷಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ. ಕಣದಲ್ಲಿ ಒಟ್ಟು 889 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇದರಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮನೋಜ್ ತಿವಾರಿ, ಬನ್ಸೂರಿ ಸ್ವರಾಜ್, ದಿಪೇಂದ್ರಸಿಂಗ್ ಹೂಡಾ, ಜೆಪಿ ಅಗರ್ವಾಲ್, ಕನ್ಹಯ್ಯಕುಮಾರ್ ಪ್ರಮುಖರು. ಬಿಹಾರ 8, ಹರಿಯಾಣ ಎಲ್ಲಾ 10 , ಜಮುಕಾಶೀರ 1, ಜಾರ್ಖಂಡ್ 4 ಸ್ಥಾನ, ದೆಹಲಿಯ ಎಲ್ಲ 7 ಸ್ಥಾನಗಳು, ಒಡಿಶಾ 6 ಸ್ಥಾನ, ಉತ್ತರಪ್ರದೇಶ 14, ಮತ್ತು ಪಶ್ಚಿಮ ಬಂಗಾಳ 8 ಸ್ಥಾನಗಳಲ್ಲಿ ಮತದಾನ ನಡೆಯಲಿದೆ.
ಹರಿಯಾಣದಲ್ಲಿ 223 ಗರಿಷ್ಠ ಅಭ್ಯರ್ಥಿಗಳು ಕಣದಲ್ಲಿದ್ದರೆ, ಜಮ್ಮು ಕಾಶ್ಮೀರದಿಂದ 20 ಕನಿಷ್ಠ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಿಹಾರ:
ಒಟ್ಟು ಎಂಟು ಸ್ಥಾನಗಳಿಗೆ ಮತದಾನ ನಡೆಯಲಿದೆ. ವಾಲೀಕಿನಗರ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಶಿವಾರ್, ವೈಶಾಲಿ, ಗೋಪಾಲ್ಗಂಜ್, ಸಿವಾನ್ ಮತ್ತು ಮಹಾರಾಜಗಂಜ್‌ನಲ್ಲಿ ಮತದಾನ ನಡೆಯಲಿದ್ದು, 86 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಹರಿಯಾಣ:
ಈ ರಾಜ್ಯದ ಎಲ್ಲಾ 10 ಸ್ಥಾನಗಳಿಗೆ ಮತದಾನ ಜರುಗಲಿದೆ. ಇಲ್ಲಿ ಒಟ್ಟು 223 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಹಂತದಲ್ಲಿ ಅಂಬಾಲಾ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಾಲ್, ಸೋನಿಪತ್, ರೋಹ್ಟಕ್, ಭಿವಾನಿ-ಮಹೇಂದ್ರಗಢ, ಗುರ್ಗಾಂವ್ ಮತ್ತು ಫರಿದಾಬಾದ್ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಮುಕಾಶೀರ:
ಇಲ್ಲಿ ಒಟ್ಟು 20 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅನಂತನಾಗ್-ರಜೌರಿ ಲೋಕಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಜಾರ್ಖಂಡ್:
ಇಲ್ಲಿ 4 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಒಟ್ಟು 93 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ಗಿರಿದಿಹ್, ಧನ್ಬಾದ್, ರಾಂಚಿ ಮತ್ತು ಜಮ್ಶೆಡ್ಪುರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದೆಹಲಿ:
ಎಲ್ಲ 7 ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು 162 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಾಂದಿನಿ ಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ವಾಯುವ್‌ಯ ದೆಹಲಿ, ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರ ಮತದಾನಕ್ಕೆ ಸಜ್ಜಾಗಿವೆ.
ಒಡಿಶಾ:
6 ಸ್ಥಾನಗಳಿಗೆ ನಡೆಯುವ ಈ ಹಂತದ ಚುನಾವಣೆಯಲ್ಲಿ ಒಟ್ಟು 64 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ ಸಂಬಲ್ಪುರ, ಕಿಯೋಂಜರ್, ಧೆಂಕನಲ್, ಪುರಿ, ಭುವನೇಶ್ವರ ಮತ್ತು ಕಟಕ್ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಉತ್ತರಪ್ರದೇಶ:
ಆರನೇ ಹಂತದಲ್ಲಿ ಉತ್ತರ ಪ್ರದೇಶದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 162 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸುಲ್ತಾನ್ಪುರ, ಪ್ರತಾಪ್ಗಢ, ಫುಲ್ಪುರ್ ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ದುಮರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್ಗಂಜ್, ಅಜಂಗಢ, ಜೌನ್ಪುರ್ ಮಚ್ಲಿಶಹರ್ ಮತ್ತು ಭದೋಹಿಯಲ್ಲಿ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳ:
8 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಣದಲ್ಲಿ ಒಟ್ಟು 79 ಅಭ್ಯರ್ಥಿಗಳಿದ್ದಾರೆ. ಈ ಹಂತದಲ್ಲಿ ತಮ್ಲುಕ್, ಕಂಠಿ, ಘಟಾಲ್, ಜಾಗ್ರ್ರಾಮ್ (ಎಸ್ಟಿ), ಮೇದಿನಿಪುರ್, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ದೇಶದಲ್ಲಿ ಏಪ್ರಿಲ್ 19 ರಿಂದ ಜೂನ್ 1ರ ತನಕ ಒಟ್ಟು 7 ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 19 ಮೊದಲ ಹಂತ, ಏಪ್ರಿಲ್ 26 2ನೇ ಹಂತ, 7ಮೇ 3ನೇ ಹಂತ, ಮೇ 13 4ನೇ ಹಂತ, ಮೇ 20ರಂದು 5ನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ ಶೇ 66.14, 2ನೇ ಹಂತದಲ್ಲಿ ಶೇ 66.71, 3ನೇ ಹಂತದಲ್ಲಿ ಶೇ 65.68, 4ನೇ ಹಂತದಲ್ಲಿ ಶೇ 69.16 ಮತ್ತು 5ನೇ ಹಂತದಲ್ಲಿ ಶೇ 62.2ರಷ್ಟು ಮತದಾನವಾಗಿದೆ.
ಜೂನ್ 1ರ 7ನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಜೂನ್ 1ರ ಸಂಜೆ ಎಕ್ಸಿಟ್ ಫೋಲ್ ಫಲಿತಾಂಶ ಸಹ ಪ್ರಕಟವಾಗಲಿದ್ದು, ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.