Friday, September 20, 2024
Homeರಾಜ್ಯವಿಚಾರಣೆಗೆ ಹಾಜರಾಗುವಂತೆ ಮುಡಾ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್‌‍

ವಿಚಾರಣೆಗೆ ಹಾಜರಾಗುವಂತೆ ಮುಡಾ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್‌‍

Lokayukta notice to Muda officials

ಬೆಂಗಳೂರು,ಸೆ.10– ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಡಾ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್‌‍ ಜಾರಿ ಮಾಡಿದೆ.ಮುಡಾದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಧೀಕ್ಷಕ(ಚೀಫ್‌ ಸೂಪರಿಡೆೆಂಟ್‌), ಮುಖ್ಯ ಅಭಿಯಂತರ(ಚೀಫ್‌ ಇಂಜಿನಿಯರ್‌), ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಒಟ್ಟು 18 ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗಬೇಕೆಂದು ಲೋಕಾಯುಕ್ತ ಅಧಿಕಾರಿಗಳು ನೋಟಿಸ್‌‍ ಜಾರಿ ಮಾಡಿದ್ದಾರೆ.

ಗುರುವಾರದೊಳಗೆ ಈ ಎಲ್ಲಾ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕು. ಮುಡಾದಲ್ಲಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಆರೋಪ ಪ್ರಕರಣ ಕುರಿತಂತೆ ಕೇಳಿಬಂದಿರುವ ಆರೋಪಗಳಿಗೆ ದಾಖಲೆಗಳನ್ನು ಹಾಜರುಪಡಿಸುವಂತೆಯೂ ಸೂಚನೆ ನೀಡಲಾಗಿದೆ.

ಮೈಸೂರು ತಾಲೂಕಿನ ಹಿನಕಲ್‌ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸೈಟ್‌ ಹಂಚಿಕೆ ಮಾಡಲಾಗಿತ್ತು. ಹಿನಕಲ್‌ ಸರ್ವೇ ನಂಬರ್‌ 89ರಲ್ಲಿ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಮುಡಾದ 7.18 ಗುಂಟೆ ಜಮೀನಿನಲ್ಲಿ ನಿವೇಶನ ಮಾಡಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಹಂಚಿರುವ ಆರೋಪವಿದೆ.

ಆರೋಪಕ್ಕೆ ಸಂಬಂಧಿಸಿ ಆರ್‌ಟಿಐ ಕಾರ್ಯಕರ್ತ ಗಂಗರಾಜು 2017ರಲ್ಲಿ ದೂರು ನೀಡಿದ್ದರು. ಈ ಸಂಬಂಧ 2022ರಲ್ಲಿ ಮೈಸೂರು ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡಿತ್ತು. ಸರ್ಕಾರದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮೈಸೂರು ತಾಲ್ಲೂಕು ಹಿನಕಲ್‌ ಗ್ರಾಮ ಸರ್ವೆ ನಂ.89ರಲ್ಲಿ 7 ಎಕರೆ 18 ಗುಂಟೆ ಜಮೀನನ್ನು ಹಿನಕಲ್‌ ಮಂಡಲ ಪಂಚಾಯ್ತಿಯವರು ಆಶ್ರಯ ಯೋಜನೆಯಡಿ ಅನಧಿಕೃತ ಬಡಾವಣೆ ನಿರ್ಮಿಸಿ/ಉಳ್ಳವರಿಗೆ ರಾಜಕೀಯ ವ್ಯಕ್ತಿಗಳಿಗೆ ಹಂಚಿಕೆ ಮಾಡಿ ವಂಚಿಸಿದ ಬಗ್ಗೆ 2017ರ ಏಪ್ರಿಲ 1ರಂದು ನಾನು ತಮ ಕಛೇರಿಗೆ ದೂರು ನೀಡಿದ್ದೆ. ಇದು ದೃಢಪಟ್ಟಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕಾಗಿ ಮನವಿ ಸಲ್ಲಿಸುತ್ತಿದ್ದೇನೆ ಎಂದು 2017ರಲ್ಲಿ ಗಂಗರಾಜು ಭ್ರಷ್ಟಾಚಾರ ನಿಗ್ರಹ ದಳದ ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್‌‍ ವರಿಷ್ಠಾಧಿಕಾರಿಗಳಿಗೂ ಪತ್ರ ಬರೆದಿದ್ದರು.

ಸರ್ವೆ ನಂ.89ರಲ್ಲಿ 7 ಎಕರೆ 18 ಗುಂಟೆ ಮುಡಾ ಪ್ರಾಧಿಕಾರದ ಸ್ವತ್ತಿನಲ್ಲಿ ಅಕ್ರಮವಾಗಿ ಮುಡಾ ಅನುಮತಿಯನ್ನು ಪಡೆಯದೇ ಬಡಾವಣೆಯನ್ನು ನಿರ್ಮಿಸಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತೇವೆಂದು ಸದರಿ ಹಿನಕಲ್‌ ಮಂಡಲ ಪಂಚಾಯ್ತಿಯ ಅಧ್ಯಕ್ಷರು, ಕಾರ್ಯದರ್ಶಿಗಳು (ಪ್ರಧಾನರು) 1990-92ನೇ ಅವಧಿಯಲ್ಲಿ ಇದ್ದಂತಹ ಪಂಚಾಯ್ತಿಯ ಸರ್ವಸದಸ್ಯರು ಹಾಗೂ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲಾ ಅಧಿಕಾರಿವರ್ಗದವರ ವಿರುದ್ದ ಕ್ರಮ ತೆಗೆದುಕೊಳ್ಳಲು ತಮ ಕಛೇರಿಗೆ ಮನವಿ ಸಲ್ಲಿಸಿದ್ದೆ. ಇದು ದೃಢವಾಗಿರುವುದರಿಂದ ಮುಡಾ ಪ್ರಾಧಿಕಾರವು ಈ ಮೇಲ್ಕಂಡ ಸ್ವತ್ತನ್ನು ಭೂ ಮಾಲೀಕರಿಂದ ಭೂಸ್ವಾಧೀನ ಮಾಡಿಕೊಳ್ಳುವ ಮುಂಚೆ ಯಾವ ಉದ್ದೇಶಕ್ಕೋಸ್ಕರ ಭೂಸ್ವಾಧೀನಕ್ಕೆ ಸರ್ಕಾರಕ್ಕೆ ನಿವೇದಿಸಿಕೊಂಡಿದ್ದರೊ ಆ ಉದ್ದೇಶವನ್ನು ಜನರಿಗೆ ಈಡೇರಿಸದೆ ವಂಚಿಸಿದೆ.

ಹೀಗೆ ವಂಚಿಸಿರುವ ಅಂದಿನ ಹಾಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಲವು ಬಾರಿ ಮುಡಾ ಪ್ರಾಧಿಕಾರಕ್ಕೂ ವಿನಂತಿಸಿಕೊಂಡಿದ್ದರೂ ಯಾವುದೇ ಕ್ರಮವಹಿಸದೆ ಕರ್ತವ್ಯ ಲೋಪ ಎಸಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಇದೇ ರೀತಿ ಮೈಸೂರು ನಗರದಲ್ಲಿ ಮೈಸೂರು ಜನರಿಗೋಸ್ಕರ ಬಡಾವಣೆ ನಿರ್ಮಿಸಿ ಹಾಗೂ ಉದ್ಯಾನವನ ಮತ್ತು ಇನ್ನಿತರ ಸಾರ್ವಜನಿಕರಿಗೋಸ್ಕರ ಸೌಲಭ್ಯ ನೀಡಲು ನೂರಾರು ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡಿದ್ದು, ಆದರೆ ಯಾವ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದಾರೋ ಮಾಡದೆ ವಂಚಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ಈ ಮುಡಾ ಕರ್ಮಕಾಂಡಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿ ಸರ್ವೆ ನಂಬರ್‌ 89ರಲ್ಲಿ ಒಟ್ಟು 11 ಎಕರೆ 18 ಗುಂಟೆಯನ್ನೂ ಸಹ ಅಕ್ರಮವಾಗಿ ಹಿನಕಲ್‌ ಮಂಡಲ ಪಂಚಾಯಿತಿಯ ಅಂದಿನ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ವಂಚಿಸಿರುತ್ತಾರೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಾಧೀನಪಡಿಸಿ ಕೊಂಡಿದ್ದಂತಹ ಸ್ವತ್ತಿನಲ್ಲಿ ಹಲವಾರು ಲ್ಯಾಂಡ್‌ ಮಾಫಿಯ ಹಾಗೂ ರಾಜಕೀಯ ಮುಖಂಡರು ಇಂತಹ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿ ಹಾಗೂ ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡುತ್ತಿದ್ದರೂ ಸಹ ಸಂಬಂಧಪಟ್ಟ ಮುಡಾ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ ಹಾಗೂ ಈ ಅಕ್ರಮಕ್ಕೆ ಸದರಿ ಮುಡಾ ಅಧಿಕಾರಿಗಳೂ ಸಹ ಶಾಮಿಲಾಗಿರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಈ ಮೇಲ್ಕಂಡ ಹೆಸರಿಸಿರುವ ಇರುವ ಸರ್ವೆ ನಂಬರ್‌ನಲ್ಲಿ 7 ಎಕರೆ 18 ಗುಂಟೆ ಸ್ವತ್ತೇ ಸಾಕ್ಷಿ ಎಂದು ಗಂಗರಾಜು ಪತ್ರದಲ್ಲಿ ಆರೋಪಿಸಿದ್ದರು.
ಸಿಎಂ ವಿರುದ್ಧ ಪ್ರಾಸಿಕ್ಯೂಸನ್‌ಗೆ ಅನುಮತಿ

ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮತ್ತು ಪ್ರದೀಪ್‌ ಮತ್ತು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಗಳ ಆಧಾರದ ಮೇಲೆ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಮುಡಾ ನಿವೇಶನಗಳ ಅಕ್ರಮ ಮಂಜೂರಾತಿ ಪ್ರಕರಣ ಮೈಸೂರಿನಲ್ಲಿ ನಡೆದಿರುವ ಕಾರಣ, ಇದರ ವಿಚಾರಣೆಯ ದೂರು ಸಹ ಮೈಸೂರಿನಲ್ಲೇ ದಾಖಲಾಗಬೇಕು.

ಟಿ.ಜೆ.ಅಬ್ರಹಾಂ ಅವರ ಹಿಂದಿನ ಮನವಿಯ ನಂತರ ಜುಲೈ 26ರಂದು ಶೋಕಾಸ್‌‍ ನೋಟಿಸ್‌‍ ಜಾರಿಗೊಳಿಸಲು ರಾಜ್ಯಪಾಲರನ್ನು ಪ್ರೇರೇಪಿಸಿತ್ತು. ನೋಟಿಸ್‌‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕೆ ಪ್ರಾಸಿಕ್ಯೂಷನ್‌ ಮಂಜೂರು ಮಾಡಬಾರದು ಎಂಬುದನ್ನು ವಿವರಿಸಿ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.

RELATED ARTICLES

Latest News