Thursday, November 14, 2024
Homeರಾಜ್ಯಭ್ರಷ್ಟರ ಬೇಟೆ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

ಭ್ರಷ್ಟರ ಬೇಟೆ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

Lokayukta Raid

ಬೆಂಗಳೂರು, ನ.12– ಅಕ್ರಮ ಸಂಪತ್ತು ಸಂಪಾದನೆ ದೂರಿನ ಆಧಾರದ ಮೇಲೆ ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬೆಂಗಳೂರು, ಮೈಸೂರು, ದಾವಣಗೆರೆ , ಧಾರವಾಡ, ಬೀದರ್ ಸೇರಿದಂತೆ 30ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ದಾವಣಗೆರೆಯ ಶಕ್ತಿನಗರದ 3ನೇ ಕ್ರಾಸ್ನಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಸಹಾಯಕ ನಿರ್ದೇಶಕ ಕಮಲ್ರಾಜ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಜಿಲ್ಲಾ ಎಸ್ಪಿ ಕೌಲಾಪುರೇ ನೇತೃತ್ವದಲ್ಲಿ ದಾಳಿ ನಡೆದಿದೆ.

ಸಿಪಿಐ ಮಧುಸೂದನ್, ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಮನೆಯ ಪ್ರತಿಯೊಂದು ಕೋಣೆಯನ್ನು ಪರಿಶೀಲನೆ ಮಾಡಿದ್ದಾರೆ. ಚಿನ್ನಾಭರಣ, ನಗದು ಹಣ ಮತ್ತು ಹಲವು ಆಸ್ತಿಪತ್ರಗಳು ಪತ್ತೆಯಾಗಿದ್ದು , ಪರಿಶೀಲನೆ ನಡೆಸಲಾಗಿದೆ.

ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಧಾರವಾಡ ನಗರದ ಗಾಂಧಿನಗರ ಬಡಾವಣೆಯಲ್ಲಿನ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಇವರಿಗೆ ಸಂಬಂಧಿಸಿದ ಧಾರವಾಡದಲ್ಲಿ ಮೂರು ಕಡೆ, ಸವದತ್ತಿ ತಾಲೂಕಿನಲ್ಲಿ , ಹೂಲಿ ಹಾಗೂ ಉಗರಗೋಳ ಗ್ರಾಮದ ಫಾರ್ಮ್ಹೌಸ್ ಹಾಗೂ ನರಗುಂದದಲ್ಲಿ ಅವರ ಸಹೋದರನ ಮನೆ ಮೇಲೂ ದಾಳಿ ನಡೆದಿದೆ.

ವಿಶೇಷವೆಂದರೆ ನರಗುಂದದಲ್ಲಿ ಗೋವಿಂದಪ್ಪ ಅವರ ಮನೆ ಎದುರು ನಿಲ್ಲಿಸಿದ್ದ ಕಾರುಗಳ ಪರಿಶೀಲನೆ ಮಾಡಲಾಗಿದೆ. ಅದರಲ್ಲಿದ್ದ ದಾಖಲೆ ಪತ್ರಗಳ ಬಗ್ಗೆ ಪರಿಶೀಲನೆ ನಡೆದಿದೆ.ಬೀದರ್ನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು,ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಇವರ ಬೆಂಗಳೂರಿನಲ್ಲಿರುವ ನಿವಾಸದಲ್ಲೂ ಪರಿಶೀಲನೆ ನಡೆದಿದೆ. ಈ ಮೊದಲು ಇವರು ಡಿಸಿ ಕಚೇರಿಯಲ್ಲಿ ಶಿರಸ್ತೇದಾರ್ ಹಾಗೂ ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದರು. ಇವರಿಗೆ ಸೇರಿದ ಹಲವು ಆಸ್ತಿ ದಾಖಲೆ ಪರಿಶೀಲಿಸಲಾಗಿದ್ದು ,ಅಪಾರ ಪ್ರಮಾಣದ ಹಣ, ಆಭರಣ ಹಲವು ಐಷಾರಾಮಿ ವಸ್ತುಗಳನ್ನು ಪತ್ತೆ ಮಾಡಲಾಗಿದೆ. ಇನ್ನು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-5ರ ಆಯುಕ್ತ ನಾಗೇಶ್ ಡಿ. ರವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಈ ಹಿಂದೆ ನಾಗೇಶ್ರವರು ಚನ್ನಪಟ್ಟಣ ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಶ್ರೀರಂಗಪಟ್ಟಣ ಹಾಗೂ ಸ್ವಂತ ಊರಾದ ಶಿವಮೊಗ್ಗ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತಹಸೀಲ್ದಾರ್ ಆಗಿದ್ದ ವೇಳೆ ಡಾಲರ್ಸ್ ಕಾಲೋನಿಯಲ್ಲಿ ಅಪಾಟ್ಮೆಂಟ್ ನಿರ್ಮಿಸಿದ್ದರು. ಪಟ್ಟಣದ ಡಾಲರ್ಸ್ ಕಾಲೋನಿ ನಿವಾಸ, ಮೈಸೂರು ನಗರ ಮೇಟಗಳ್ಳಿ ಬಸವನಗುಡಿ ವೃತ್ತದ ಬಳಿ ಇರುವ ವಲಯ ಕಚೇರಿಯಲ್ಲೂ ಲೋಕಾಯುಕ್ತ ತಂಡದಿಂದ ತಪಾಸಣಾ ಕಾರ್ಯ ನಡೆದಿದೆ. ದಾಳಿ ವೇಳೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News