ಮೈಸೂರು,ಏ.8- ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಲೆಕ್ಕ ಪತ್ರ ವಿಭಾಗದ ಮೇಲ್ವಿಚಾರಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾರ್ಯಪಾಲಕ ಅಭ್ಯಂತರ ರಂಗನಾಥ್ ಹಾಗೂ ಮೇಲ್ವಿಚಾರಕ ಉಮಾ ಮಹೇಶ್ ಲೋಕಾಯುಕ್ತರ ಕಾರ್ಯಾಚರಣೆಯಲ್ಲಿ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಚಾಮರಾಜನಗರದ ಗುತ್ತಿಗೆದಾರರೊಬ್ಬರು ನಡೆಸಿದ್ದ, ನಾಲೆ ದುರಸ್ಥಿ ಕಾಮಗಾರಿಯ ಬಿಲ್ ಹಣ ಬಿಡುಗಡೆ ಮಾಡಲು ಲಂಚ ಕೇಳಿದ್ದರು.ಸುಮಾರು 23 ಲಕ್ಷದ ಟೆಂಡರ್‌ಗೆ ಶೇ.6 ರಷ್ಟು ಲಂಚ ನೀಡಬೇಕೆಂದು ಒತ್ತಡ ಏರಿದ್ದರೂ ನಂತರ 1.45 ಲಕ್ಷಕ್ಕೆ ಕೊಡಲೇಬೇಕೆಂದು ಪಟ್ಟು ಹಿಡಿದ್ದಿದ್ದರು.
ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಗುತ್ತಿಗೆದಾರ ಬಿಲ್ ಪಾವತಿಗೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಲೋಕಾಯುಕ್ತ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡು ಲಂಚದ ಹಣ ಪಡೆಯುವಾಗ ಈ ಇಬ್ಬರು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದು, ಅವರನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.