Tuesday, July 29, 2025
Homeರಾಜ್ಯಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆ, ರಾಜ್ಯದ 6 ಕಡೆ ಲೋಕಾಯುಕ್ತ ದಾಳಿ

ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆ, ರಾಜ್ಯದ 6 ಕಡೆ ಲೋಕಾಯುಕ್ತ ದಾಳಿ

Lokayukta raids 6 places in the state

ಬೆಂಗಳೂರು, ಜು.29- ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಕಡೆ ಕಾರ್ಯಾಚರಣೆ ನಡೆಸಿದ್ದಾರೆ. ಕೆಲವೆಡೆ ಮಳೆಯ ನಡುವೆಯೂ ನಿರ್ದಿಷ್ಟ ಪ್ರದೇಶಗಳ ಮೇಲೆ ದಾಳಿ ನಡೆದಿದೆ. ಕೆಲವೆಡೆ ಲೋಕಾಯುಕ್ತರ ಅಧಿಕಾರಿಗಳನ್ನು ಕಂಡು ಮನೆಯವರು ತಬ್ಬಿಬ್ಬಾಗಿದ್ದಾರೆ.

ಭ್ರಷ್ಟ ಅಧಿಕಾರಿಗಳ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳು ಸೇರಿದಂತೆ ಆಗಾಧ ಪ್ರಮಾಣದ ಸಂಪತ್ತನ್ನು ಪತ್ತೆ ಹಚ್ಚಿದ್ದಾರೆ.ಬೆಂಗಳೂರಿನ ದಾಸರಹಳ್ಳಿ ಉಪವಿಭಾಗದ ಬಿಬಿಎಂಪಿ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎನಲ್ಲಿ ತೋಟಗರಿಕೆ ವಿಭಾಗದ ಸಹಾಯಕ ನಿರ್ದೇಶಕ ಅಧಿಕಾರಿ ಓಂ ಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯಿತಿ ಕಿರಿಯ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.

ಗೌರಿಬಿದನೂರಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಎಂಜಿನಿಯರ್ ಆಂಜನೇಯ ಅವರ ಬೆಂಗಳೂರಿನ ಯಲಹಂಕ ನಿವಾಸ, ತುಮಕೂರು ನಗರದಲ್ಲಿರುವ ತೋಟ, ಮನೆ ಹಾಗೂ ಅವರು ಕಾರ್ಯನಿರ್ವಹಿಸುತ್ತಿರುವ ಕಚೇರಿಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಮೂರು ಮನೆ, ವಾಣಿಜ್ಯ ಸಂಕೀರ್ಣ ಇರುವುದು ಗೊತ್ತಾಗಿದ್ದು, ತುಮಕೂರು ಸೇರಿದಂತೆ ಹಲವೆಡೆ ನಿವೇಶನಗಳು, ಕೃಷಿ ಜಮೀನು ಹೊಂದಿರುವ ದಾಖಲೆಗಳು ಪತ್ತೆಯಾಗಿವೆ.
ಬೆಂಗಳೂರು ಹಾಗೂ ತುಮಕೂರು ವಿಭಾಗದ ಲೋಕಾಯುಕ್ತ ಪೊಲೀಸರು ಜಂಟಿಯಾಗಿ 6ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಅಕ್ರಮ ಸಂಪತ್ತಿನ ಮೌಲ್ಯ ಕಲೆ ಹಾಕಲಾಗುತ್ತಿದೆ. ಮನೆಯಲ್ಲೂ ಕಂತೆ-ಕಂತೆ ಹಣ, ಅಪಾರ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಗಳು ಐಷಾರಾಮಿ ವಸ್ತುಗಳು ಝಗಮಗಿಸಿವೆ.
ಚಿತ್ರದುರ್ಗದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್‌ಗೆ ಲೋಕಾಯುಕ್ತ ಶಾಕ್ ನೀಡಿದೆ. ಮನೆ, ಕಚೇರಿ ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ ಮೃತ್ಯುಂಜಯ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯ ಮನೆ, ಆದಿವಾಲ ಗ್ರಾಮದಲ್ಲಿರುವ ಮನೆ ಹಾಗೂ ಅವರು ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ಮನೆಯಲ್ಲಿ ಕೆಲವು ಸರ್ಕಾರಿ ದಾಖಲೆಗಳು, ಔಷಧ ಪರಿಕರಗಳು ಪತ್ತೆಯಾಗಿವೆ. ಸರ್ಕಾರಿ ಆಸ್ಪತ್ರೆಗಳ ಕೆಲ ದಾಖಲೆಗಳು ಕೂಡ ಸಿಕ್ಕಿವೆ. ಕಳೆದ ಹಲವು ದಿನಗಳಿಂದ ಇವರ ಮೇಲೆ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆಯ ಆರೋಪಗಳು ಕೇಳಿ ಬಂದಿದ್ದು, ಲೋಕಾಯುಕ್ತ ಈಗ ದಾಳಿ ನಡೆಸಿ ಅಕ್ರಮ ಆಸ್ತಿ ದಾಖಲೆಗಳನ್ನು ಬಯಲಿಗೆಳೆದಿದ್ದಾರೆ.

ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ ಅವರ ನಿವಾಸದಲ್ಲಿ ಇಂದು ಲೋಕಾಯುಕ್ತ ಪೊಲೀಸರು ಬರುತ್ತಿದ್ದಂತೆಯೇ ಮನೆಯವರು ತಬ್ಬಿಬ್ಬಾಗಿದ್ದಾರೆ. ಇನ್ನೂ ಮಲಗಿದ್ದ ಅಧಿಕಾರಿ ಲೋಕಾಯುಕ್ತರ ಆಗಮನದಿಂದ ಶಾಕ್ ಆಗಿದ್ದಾರೆ. ಮನೆ ಹಾಗೂ ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದಾಗ ಹಲವು ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಮನೆಯಲ್ಲೂ ಲಕ್ಷಾಂತರ ರೂ. ಹಣ, ಚಿನ್ನ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.

ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಇವರ ಚೆನ್ನಪಟ್ಟಣದಲ್ಲಿರುವ ಮನೆ ಮತ್ತು ಅವರು ನಡೆಸುತ್ತಿದ್ದ ಹಾರ್ಡ್‌ವೇರ್ ಅಂಗಡಿ ಸೇರಿದಂತೆ ವಿವಿಧೆಡೆ ದಾಳ ನಡೆದಿದೆ.ಬೆಳಗಿನ ಚುಮು-ಚುಮು ಚಳಿಯಲ್ಲಿ ಲೋಕಾಯುಕ್ತ ಮಿಂಚಿನ ಕಾರ್ಯಾಚರಣೆ ನಡೆಸಿದೆ.

RELATED ARTICLES

Latest News