ಬೆಂಗಳೂರು, ಫೆ.17- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಕೇಳಿಬಂದ ಮುಡಾ ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲು ಲೋಕಾಯುಕ್ತ ಅಧಿಕಾರಿಗಳು ಸಮಯಾವಕಾಶ ಕೋರಿದ್ದಾರೆ. ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಸೂಚನೆಯಂತೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ನಾಲ್ಕು ದಿನಗಳ ಹಿಂದೆ ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದರು.
ಈ ವರದಿಯನ್ನು ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರು ಅಧ್ಯಯನ ನಡೆಸಿದ್ದು, ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅಂತಿಮ ವರದಿ ಸಲ್ಲಿಕೆಗೆ ಸಮಯ ಅವಕಾಶ ನೀಡಬೇಕೆಂದು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜಾನನ ಭಟ್ ಅವರು ಸರ್ಕಾರದ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ ಮುಂದಿನ ವಿಚಾರಣೆಯನ್ನು ಇದೇ ತಿಂಗಳ 24ಕ್ಕೆ ಮುಂದೂಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮದ ಕುರಿತು ಬಹುತೇಕ ತನಿಖೆ ಪೂರ್ಣಗೊಳಿಸಿರುವ ಮೈಸೂರು ಲೋಕಾಯುಕ್ತ ಪೊಲೀಸರು, ವರದಿಯನ್ನು ಲೋಕಾಯುಕ್ತ ಐಜಿಪಿಗೆ ಸಲ್ಲಿಕೆ ಮಾಡಿದ್ದರು. ತನಿಖಾ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರು ಪಡೆದಿರುವ 14 ಬದಲಿ ನಿವೇಶನ ಪ್ರಕ್ರಿಯೆಯಲ್ಲಿ ರಾಜಕೀಯ, ಅಧಿಕಾರ ಪ್ರಭಾವ ನಡೆದಿಲ್ಲ ಎಂಬುದರ ಬಗ್ಗೆ ಹೇಳಲಾಗಿತ್ತು.
ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತಂಡ ಇಡೀ ಹಗರಣದ ಕುರಿತು ಐದು ಪ್ರತ್ಯೇಕ ಸಂಪುಟಗಳಲ್ಲಿ 550 ಪುಟಗಳ ವರದಿಯನ್ನು ಐಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ಸಲ್ಲಿಕೆ ಮಾಡಿದೆ.
ವರದಿ ಸಲ್ಲಿಕೆ ಬಗ್ಗೆ ಖಚಿತಪಡಿಸಿರುವ ಲೋಕಾಯುಕ್ತ ಉನ್ನತ ಮೂಲಗಳು, ವರದಿ ಪರಿಶೀಲನೆ ಮಾಡಿ ಕಾನೂನು ಕೋಶ ಪರಾಮರ್ಶೆ ನಡೆಸಲಿದೆ. ಬಳಿಕವಷ್ಟೇ ಪ್ರಕರಣ ಚಾರ್ಜ್ ಶೀಟ್ ಗೆ ಯೋಗ್ಯವೋ ಅಥವಾ ಬಿ ರಿಪೋರ್ಟ್‌ಗೆ ಅರ್ಹವೋ ಎಂಬುದು ಸಷ್ಟವಾಗಲಿದೆ ಎಂದು ಮೂಲಗಳು ಹೇಳಿವೆ.
ಅಧಿಕಾರಿಗಳು ಹೊಣೆ?:
ಮುಡಾ ನಿವೇಶನ ಹಂಚಿಕೆ ಅಕ್ರಮದಲ್ಲಿ ಕೆಲವು ಕಾನೂನು ನಿಯಮಗಳ ಉಲ್ಲಂಘನೆಯಾಗಿವೆ. ಜತೆಗೆ, 14 ನಿವೇಶನ ಹಂಚಿಕೆ ಪ್ರಕ್ರಿಯೆಗಳ ಕುರಿತು ಇಂಚಿಂಚೂ ವರದಿ ದಾಖಲಿಸಲಾಗಿದೆ. ಕೆಲವು ಅಧಿಕಾರಿ, ಸಿಬ್ಬಂದಿ ಕಡೆಯಿಂದ ಲೋಪಗಳು ನಡೆದಿರುವ ಸಾಧ್ಯತೆಯಿದೆ. ಆದರೆ, ರಾಜಕೀಯ, ಅಧಿಕಾರ ಪ್ರಭಾವ ನಡೆದಿರುವುದು ಅನುಮಾನ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಅದಕ್ಕೆ ಸಂಬಂಧಿಸಿದ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಲೋಕಾಯುಕ್ತ ಮೂಲಗಳು ಖಚಿತಪಡಿಸಿಲ್ಲ.ಬಿಎಂ ಪಾರ್ವತಿ ಅವರು 14 ಬದಲಿ ನಿವೇಶನಗಳನ್ನು ಪಡೆದಿರುವ ಸಂಬಂಧ ಸಮಗ್ರ ತನಿಖೆ ನಡೆಸಲಾಗಿದೆ. ದೇವರಾಜು ಅವರಿಗೆ ಹೇಗೆ ಜಮೀನು ಸಿಕ್ಕಿತ್ತು. ಬಳಿಕ ಡಿನೋಟಿಫಿಕೇಶ್, ಪಾರ್ವತಿ ಅವರಿಗೆ ದಾನ ನೀಡಿದ್ದರ ಕುರಿತೂ ಮಾಹಿತಿ ಉಲ್ಲೇಖವಾಗಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಆಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಇದರಿಂದಾಗಿ ಸಿಎಂಗೆ ದೊಡ್ಡ ರಿಲೀಫ್ ಸಿಕ್ಕಿತ್ತು.
ಕರ್ನಾಟಕ ಲೋಕಾಯುಕ್ತ ಪೊಲೀಸರಿಂದ ಸಮರ್ಪಕ ತನಿಖೆ ಸಾಧ್ಯವಿಲ್ಲ, ಹಾಗಾಗಿ, ತನಿಖೆ ಸಿಬಿಐಗೆ ವಹಿಸಬೇಕೆಂದು ಕೋರಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿತ್ತು.