ಬೆಂಗಳೂರು,ಅ.14-ರಾಜಕೀಯ ಗದ್ದಲದ ನಡುವೆ ರಾಜ್ಯಾದ್ಯಂತ ಬೆಳ್ಳಂಬೆಳಿಗ್ಗೆ ಏಕಕಾಲದಲ್ಲಿ 12 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ಅಕ್ರಮವಾಗಿ ಗಳಿಸಿದ್ದ ಸಂಪತ್ತು ಬಯಲಿಗೆಳೆದಿದೆ. ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಬಂದ ದೂರುಗಳನ್ನು ಆಧರಿಸಿ ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ಹಾವೇರಿ,ಉಡುಪಿ,ಕಲಬುರ್ಗಿ,ಬೆಂಗಳೂರು ಸೇರಿ 40ಕ್ಕೂ ಹೆಚ್ಚು ಕಡೆ ಮಿಂಚಿನ ದಾಳಿ ನಡೆಸಲಾಗಿದೆ.
ಔರಾದ್ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೂಳಪ್ಪ ಅವರ ಬೀದರ್ ನಗರದ ಗುರುನಾನಕ್ ಕಾಲೋನಿಯ ನಿವಾಸ ಸೇರಿದಂತೆ ಏಕಕಾಲಕ್ಕೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ,ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಒಟ್ಟು 4 ಕಡೆ ದಾಳಿ ಮಾಡಲಾಗಿದೆ.
ಭಾಲ್ಕಿಯ ಕಡ್ಯಾಳ ಗ್ರಾಮದ ನಿವಾಸ, ಔರಾದ್ನ ಸಹಾಯಕ ನಿದೇರ್ಶಕರ ಕಚೇರಿ ಮತ್ತು ಔರಾದ್ನ ಮುದೋಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಸಿಬ್ಭಂಧಿ ಅಲರ್ಟ್ ಆಗಿದ್ದಾರೆ.ಕಾವಲುಗಾರನಿಂದ ಬೀಗ ತೆಗಸಿ ಒಳಗೆ ತಪಾಸಣೆ ಮಾಡಲಾಗಿದೆ ಇದರ ಬಗ್ಗೆ ಮಾಹಿತಿ ಪಡೆದು ಕೆಲ ಹಿರಿಯ ಸಿಬ್ಬಂಧಿ ಕಚೇರಿಗೆ ಆಗಮಿಸಿದ್ದಾರೆ. ಇಲ್ಲಿ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ಹೊಳಲ್ಕೆರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕುಮಾರ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಹಲವೆಡ ಶೋಧ ನಡೆಸಿದೆ.
ತರಳಬಾಳು ನಗರದಲ್ಲಿರುವ ಚಂದ್ರಕುಮಾರ್ ಮನೆಗೆ ಅಧಿಕಾರಿಗಳು ಬರುತ್ತಿದ್ದಂತೆ ಮನೆಯವರು ಶಾಕ್ ಆಗಿದ್ದಾರೆ. ಮನೆಯಲ್ಲಿ ಲಕ್ಷಾಂತರ ರೂ ನಗದು,ಚಿನ್ನಭರಣ, ಮತ್ತಿತರ ಬೆಲೆಬಾಳುವ ವಸ್ತುವನ್ನು ಪತ್ತೆ ಮಾಡಿದ್ದಾರೆ.ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದ ಮನೆಗಳು ಹಾಗು ಕಚೇರಿ ಮೇಲೂ ದಾಳಿ ನಡೆದಿದೆ.
ದಾವಣಗೆರೆಯಲ್ಲಿ ಕೆಆರ್ ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್ಡಿಎ ನಡುವಿನನಮಾನಿ ಮನೆ, ಕಚೇರಿ ಹಾಗು ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಮೂಲಗಳ ಪ್ರಕಾರ ಇಬ್ಬರು ಅಧಿಕಾರಿಗಳಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾವಣಗೆರೆ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದೆ.
ಇಬ್ಬರ ಮನೆಯಲ್ಲೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ,ನಿವೇಶನ ,ಕೃಷಿ ಜಮೀನು ಸೇರಿದಂತೆ ಹಲವು ದಾಖಲಾತಿ ದೊರೆತಿದ್ದು, ಅಧಿಕಾರಿಗಳು ಪರೀಶಿಲನೆ ನಡೆಸಿದ್ದಾರೆ
ಹಾಸನದ ಸತ್ಯಮಂಗಲ ಬಡಾವಣೆಯಲ್ಲಿರುವ ಆರೋಗ್ಯ ಇಲಾಖೆ ಪ್ರಥಮ ದರ್ಜೆಸಹಾಯಕಿ ಜ್ಯೋತಿ ಮೇರಿ ಅವರ ಮನೆ ಹಾಗೂ ಕುವೆಂಪು ನಗರದಲ್ಲಿರುವ ಅವರ ತಂಗಿಯ ನಿವಾಸದ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ಲೋಕಾಯುಕ್ತ ಎಸ್ಪಿ ಸ್ನೇಹ, ಡಿವೈಎಸ್ಪಿ ಸುರೇಶ್, ಇನ್ಸ್ ಪೆಕ್ಟರ್ ಶಿಲ್ಪಾ ಮತ್ತು ಚಂದ್ರಶೇಖರ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು.ಹಲವೆಡೆ ನಿವೇಶನ ಸೇರಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಶೋಧ ಕಾರ್ಯಚರಣೆ ಸಂಜೆವರೆಗೂ ಮುಂದುವರೆದಿದ್ದು ಅಧಿಕಾರಿಗಳು ಮನೆ ಹಾಗೂ ಆಸ್ಪತ್ರೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹಾವೇರಿಯಲ್ಲಿ ಸವಣೂರ ಪುರಸಭೆ ಮುಖ್ಯಾಧಿಕಾರಿ, ರಾಣೆಬೆನ್ನೂರ ಆರ್ ಒ ಮನೆ ಮೇಲೆ ದಾಳಿ
ರಾಣೆಬೆನ್ನೂರ:
ನಗರದ ಎರಡು ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಕ್ರಮ ಆಸ್ತಿಗಳಿಸಿದ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇಲ್ಲಿಯ ಚೋಳಮರಡೇಶ್ವರ ನಗರದ ನಿವಾಸಿಸವಣೂರ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಡೇನೂರ ಹಾಗೂ ಸಿದ್ದೇಶ್ವರ ನಗರದ ನಿವಾಸಿ ರಾಣೆಬೆನ್ನೂರ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮನೆ ಮೇಲೆ ನಡೆದಿದೆ.
ಇಲ್ಲಿ ದಾವಣಗೆರೆ ಹಾಗೂ ಹಾವೇರಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಮನೆಯಲ್ಲಿರುವ ದಾಖಲಾತಿ, ಚಿನ್ನಾಭರಣ ಹಾಗೂ ನಗದು ಪರಿಶೀಲನೆ ನಡೆಸುತ್ತಿದ್ದಾರೆ.
ಚಿನ್ನಾಭರಣ, ನಿವೇಶನ ಸೇರಿ ಹಲವು ಅಕ್ಕಮ ಸಂಪತ್ತು ಬೆಳಕಿಗೆ ಬಂದಿದೆ.