ಬೆಂಗಳೂರು,ಏ.17– ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಲಾರಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಸರಕು ಸಾಗಾಟದಲ್ಲಿ ಭಾರಿ ವ್ಯತ್ಯಯ ಕಂಡು ಬಂದಿದ್ದು ಅಗತ್ಯ ವಸ್ತುಗಳ ಅಭಾವ ತಲೆದೋರಿದೆ.ಲಾರಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದ ರೈತರು, ವರ್ತಕರು ವಿವಿಧ ಉದ್ಯಮಿ ಗಳು ಸಂಕಷ್ಟಕ್ಕೆ ಈಡಾಗುವಂತಾಗಿದೆ.
ಹೊರ ರಾಜ್ಯಗಳಿಂದ ಬರುವ ಹಣ್ಣು, ತರಕಾರಿ, ಸೊಪ್ಪು,ದಿನನಿತ್ಯದ ಪದಾರ್ಥಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಸರಕು ಸಾಗಣಿಕೆ ವಾಹನಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಹಳ್ಳಿಗಳಿಂದ ಹಣ್ಣು, ತರಕಾರಿ ಮತ್ತಿತರ ವಸ್ತುಗಳು ಸಾಗಾಟವಾಗದೆ ಕೊಳೆಯತೊಡಗಿವೆ. ಎಲ್‌ಪಿಜಿ ಗ್ಯಾಸ್, ಗೃಹ ಬಳಕೆ ಗ್ಯಾಸ್, ದಿನಸಿ, ಜಲ್ಲಿ, ಮರಳು,ಕಬ್ಬಿಣ ಸೇರಿದಂತೆ ಅನೇಕ ಬಗೆಯ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದೆ.
ಮುಷ್ಕರದಿಂದ ಮನೆ ನಿರ್ಮಾಣ ಕಾಮಗಾರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಕ್ಕಿ,ಬೇಳೆ,ಎಣ್ಣೆ ಸೇರಿದಂತೆ ದಿನನಿತ್ಯ ಪದಾರ್ಥಗಳ ವಹಿವಾಟಿನ ಮೇಲೂ ಮುಷ್ಕರದ ಬಿಸಿ ತಟ್ಟಿದೆ.ಅಗತ್ಯ ವಸ್ತುಗಳ ಲಭ್ಯತೆ, ಇಂಧನ ಪೂರೈಕೆಯಲ್ಲಿ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಡೀಸೆಲ್ ಹಾಗೂ ಟೋಲ್ ದರ ಇಳಿಕೆ ಮಾಡುವಂತೆ ಲಾರಿ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದರೂ.ಸರ್ಕಾರದಿಂದ ಯಾವುದೇ ಭರವಸೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದುವರೆಸಿದ್ದು, ಶ್ರೀ ಸಾಮಾನ್ಯರ ಜೀವನದ ಮೇಲೆ ಮುಷ್ಕರದ ಬಿಸಿ ತಟ್ಟಲಿದೆ.
ಲಾರಿ ಮುಷ್ಕರದ ಬಿಸಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು,ಕೇರಳ ಹಾಗೂ ಗೋವಾ ರಾಜ್ಯಗಳಿಗೂ ತಟ್ಟಿದೆ. ಹೊರ ರಾಜ್ಯಗಳಿಂದ ಬರುತ್ತಿರುವ ಹಣ್ಣು, ತರಕಾರಿ, ವಿವಿಧ ಬಗೆಯ ಪದಾರ್ಥಗಳು ಸ್ಥಗಿತಗೊಂಡು ರೈತರು,ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇಂದು ಮಧ್ಯಾಹ್ನ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣುಗಪ್ಪ ಮತ್ತು ಪದಾಧೀಕಾರಿಗಳು, ಸಾರಿಗೆ ಸಚಿವ ರಾಮಲಿಂಗರೆಡ್ಡಿ ರವರಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಗೂಡ್‌್ಸ ವಾಹನಗಳು ಟ್ರಕ್ ಸೇರಿ 6 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗೆ ಇಳಿದಿಲ್ಲ. ಚಾಲಕರು ಕ್ಲೀನರ್ ಅವಲಂಭಿತರು ಸೇರಿ ಲಕ್ಷಾಂತರ ಜನ ಲಾರಿಗಳನ್ನು ನಂಬಿ ಬದುಕುತ್ತಿದ್ದಾರೆ. ಸರ್ಕಾರ ಪದೆ ಪದೇ ಡೀಸೆಲ್ ದರ, ಟೋಲ್ ದರ ಹೆಚ್ಚುಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಟೋಲ್ ಗಳಲ್ಲಿ ಆರ್‌ಟಿಓ ಅಧಿಕಾರಿಗಳ ಅನಗತ್ಯ ಕಿರುಕುಳ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.