Tuesday, September 9, 2025
Homeರಾಜ್ಯಮತಾಂಧರ ಅಟ್ಟಹಾಸ ಖಂಡಿಸಿ ಮದ್ದೂರು ಬಂದ್‌, ಸಾರ್ವಜನಿಕರಿಂದ ಸ್ವಯಂಪ್ರೇರಿತರಾಗಿ ಬೆಂಬಲ

ಮತಾಂಧರ ಅಟ್ಟಹಾಸ ಖಂಡಿಸಿ ಮದ್ದೂರು ಬಂದ್‌, ಸಾರ್ವಜನಿಕರಿಂದ ಸ್ವಯಂಪ್ರೇರಿತರಾಗಿ ಬೆಂಬಲ

Maddur bandh to condemn the violence , voluntary support from the public

ಮದ್ದೂರು,ಸೆ.9- ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಅನ್ಯಕೋಮಿನವರಿಂದ ಕಲ್ಲು ತೂರಾಟ ನಡೆದಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್‌ ಬಹುತೇಕ ಯಶಸ್ವಿಯಾಗಿದ್ದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.ಬೆಳಗ್ಗಿನಿಂದಲೇ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ತಬ್ದಗೊಂಡಿದ್ದವು. ಪ್ರತಿದಿನ ಬಸ್‌‍, ಅಟೋ, ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಪಟ್ಟಣದಲ್ಲಿ ಒಂದು ರೀತಿ ನೀರವ ಮೌನ ಆವರಿಸಿತ್ತು.

ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದರು. ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ ಸಹ ಮದ್ದೂರು ಪಟ್ಟಣದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮುಂದುವರಿದಿದೆ.ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಬೆಂಬಲ ಕೊಟ್ಟಿತ್ತು. ಮದ್ದೂರಿನ ಕೆಎಂ ದೊಡ್ಡಿ, ಬೆಸಗರಹಳ್ಳಿ, ಕೆಸ್ತೂರು ಸೇರಿದಂತೆ ಹೋಬಳಿ ಕೇಂದ್ರಗಳು ಸಹ ಬಂದ್‌ ಆಗಿದ್ದವು. ಸಾವಿರಾರು ಜನ ಹಿಂದೂ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗಿಯಾಗಿ ಪಟ್ಟಣದ ಪೇಟೆ ಬೀದಿ ಮೂಲಕ ಐಬಿ ವೃತ್ತದವರೆಗೂ ರ್ಯಾಲಿ ನಡೆಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ವರು ಎಸ್ಪಿಗಳು, ಹೆಚ್ಚುವರಿ ಎಸ್ಪಿಗಳು ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌‍ ಪಡೆಗಳು ಸೇರಿದಂತೆ ಸುಮಾರು 800 ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಮಂಡ್ಯ ಪೊಲೀಸ್‌‍ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿ :
ಪಟ್ಟಣದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಾಳೆ ಬೆಳಿಗ್ಗೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಸಾಕಷ್ಟು ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.

ಎರಡು ಎಫ್‌ಐಆರ್‌ :
ಮದ್ದೂರಿನ ರಾಮ್‌ರಹೀಮ್‌ ನಗರದಲ್ಲಿ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಾಗ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ.

ಸ್ವಯಂಪ್ರೇರಿತವಾಗಿ ಒಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 22 ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಸೀದಿಯಿಂದ ಸುಮಾರು 500 ಮೀಟರ್‌ ದೂರದಲ್ಲಿ ಆರಂಭವಾದ ಕಲ್ಲು ತೂರಾಟವು ಮೆರವಣಿಗೆಯಲ್ಲಿದ್ದ ಸದಸ್ಯರಿಂದ ಪ್ರತೀಕಾರಕ್ಕೆ ಕಾರಣವಾಯಿತು. ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಹಿಂದೂ ಕಾರ್ಯಕರ್ತರು ಜೈ ಶ್ರೀ ರಾಮ್‌ ಘೋಷಣೆಗಳನ್ನು ಕೂಗಿ, ಟೈರ್‌ ಸುಟ್ಟು, ಕೇಸರಿ ಧ್ವಜಗಳನ್ನು ಬೀಸುತ್ತಾ ಪ್ರತಿಭಟನೆ ನಡೆಸಿ ತಮ ಆಕ್ರೋಶ ವ್ಯಕ್ತಪಡಿಸಿದ್ದರು.

ಎಚ್ಚೆತ್ತ ಸರ್ಕಾರ : ಶಾಂತಿ ಸಭೆ
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಬೃಹತ್‌ ಪ್ರತಿಭಟನೆ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಇಂದು ಮಧ್ಯಾಹ್ನ 3 ಗಂಟೆಗೆ ಶಾಂತಿ ಸಭೆ ಕರೆದಿದೆ. ಸಚಿವರಾದ ಚಲುವರಾಯ ಸ್ವಾಮಿ ಅವರ ನೇತೃತ್ವದಲ್ಲಿ ಎರಡು ಕೋಮಿನ ಮುಖಂಡರೊಂದಿಗೆ ಶಾಂತಿ ಸಭೆ ನಡೆಯಲಿದೆ.ಶಿವಪುರ ಸತ್ಯಾಗ್ರಹ ಸೌಧ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್‌, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಶಾಂತಿ ಕಾಪಾಡಲು ಶಾಸಕರ ಮನವಿ
ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಘಟನೆ ವಿಷಾದನೀಯ, ಸ್ಥಳೀಯರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕೆಂದು ಶಾಸಕರಾದ ಕೆ.ಎಂ.ಉದಯ್‌ ಅವರು ಮನವಿ ಮಾಡಿದ್ದಾರೆ. ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಕಡೆಗಳಿಂದ ಕಲ್ಲು ಎಸೆದ ಘಟನೆ ವಿಷಾದಕರ. ತಕ್ಷಣವೇ ಪೊಲೀಸರು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು 21 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ. ಯಾವುದೇ ಹಿಂದೂ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಘಟನೆಯ ಕೆಲವೇ ಗಂಟೆಗಳಲ್ಲಿ ಶೀಘ್ರ ಕ್ರಮ ಕೈಗೊಂಡಿದ್ದಾರೆ ಎಂದರು.

ಆದರೆ, ಕೆಲ ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರು ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಿ ಜನರಲ್ಲಿ ಪ್ರಚೋದನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಶಾಂತಿಯ ಸಂದೇಶ ನೀಡಬೇಕಾದ ಜಾಗದಲ್ಲಿ ಕೋಮು ಗಲಭೆ ಪ್ರಚೋದನೆ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಮದ್ದೂರಿನಲ್ಲಿ ಇದುವರೆಗೆ ಈ ರೀತಿಯ ಘಟನೆ ನಡೆದಿರಲಿಲ್ಲ. ಹೊರಗಿನಿಂದ ಬಂದ ಕೆಲ ಕಾಣದ ಕೈಗಳಿಂದ ಈ ಗಲಭೆ ಉಂಟಾಗಿರಬಹುದು ಎಂಬ ಸಾಧ್ಯತೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಆರ್‌ಎಎಫ್‌ ನಿಯೋಜನೆ :
ಮದ್ದೂರು ಪಟ್ಟಣದಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಬಂದೋಬಸ್ತ್‌ಗಾಗಿ ಸ್ಥಳೀಯ ಪೊಲೀಸರ ಜೊತೆ ಎರಡು ಕಂಪನಿ ಆರ್‌ಎಎಫ್‌ ನಿಯೋಜನೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿಯವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಿನ್ನೆ ಈ ಕಂಪನಿಗಳು ಮದ್ದೂರಿಗೆ ಆಗಮಿಸಿದ್ದು, ಪಥಸಂಚಲನ ನಡೆಸಲಾಗಿತ್ತು. ಇಂದು ಸಂಜೆ ಮತ್ತೆ ಪಥಸಂಚಲನ ಮಾಡಲಾಗುವುದು ಎಂದರು.

ಮದ್ದೂರು ಪಟ್ಟಣದಲ್ಲಿ ಇಂದು ಬಂದ್‌ ಬಹುತೇಕ ಶಾಂತಿಯುತವಾಗಿದೆ. ನಾವು ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಿದ್ದೇವೆ. ಘಟನೆ ಸಂಬಂಧ ಈಗಾಗಲೇ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದರು.ಘಟನೆಯಲ್ಲಿ ಐದಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

RELATED ARTICLES

Latest News