ಮಂಡ್ಯ,ಸೆ.8– ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ ನಾಳೆ ಮದ್ದೂರು ಬಂದ್‌ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ನಿನ್ನೆ ಸಂಜೆ ಶಾಂತಿಯುತ ಗಣೇಶಮೂರ್ತಿ ಮೆರವಣಿಗೆಗೆ ಅಡ್ಡಿಪಡಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಲ್ಲು ತೂರಿ, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಇಂಥ ಘಟನೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾಳೆ ಮದ್ದೂರು ಬಂದ್‌ಗೆ ಕರೆ ನೀಡಿವೆ.
ಗುಂಪು ಚದುರಿಸುವ ವೇಳೆ ಮಹಿಳೆಯರು ಎನ್ನದೇ ಲಾಠಿ ಬೀಸಿದ್ದರಿಂದ ಗಾಯಗೊಂಡ ಯುವತಿಯೊಬ್ಬಳು ರಸ್ತೆ ಮಧ್ಯೆ ಕೂತು ಬಾಯಿ ಬಡೆದುಕೊಂಡು ಹಿಡಿ ಶಾಪ ಹಾಕಿದ್ದು ಕಂಡು ಬಂತು. ಕೆಲ ಯುವಕರು ಪೊಲೀಸರ ನಡೆಯನ್ನು ಖಂಡಿಸಿ ಸ್ಥಳದಲ್ಲೇ ಕೂತು ಆಕ್ರೋಶ ಹೊರಹಾಕಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದ ವೇಳೆ ರಸ್ತೆ ಬದಿ ನಿಲ್ಲಿಸಿದ ವಾಹನಗಳ ಮೇಲೆ ಬಿದ್ದು ಕೆಲವರು ಗಾಯಗೊಂಡಿದ್ದಾರೆ.
ಈ ನಡುವೆ ಸ್ಥಳೀಯ ಶಾಸಕರ ಮನೆಯ ಬಳಿಯು ಪ್ರತಿಭಟನೆ ನಡೆದಿದ್ದು, ಪೊಲೀಸರು ಅದನ್ನು ತಡೆದಿದ್ದಾರೆ. ಒಟ್ಟಾರೆ ಮದ್ದೂರಿನಲ್ಲಿ ಪ್ರತಿಭಟನೆಗಳು ಮುಂದುವರೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿಯನ್ನು ತಡೆದು ನೂರಾರು ಮಂದಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್‌ಸಿಂಹ ಕೂಡ ಆಗಮಿಸಿ ಬೆಂಬಲ ಸೂಚಿಸಿದ್ದಾರೆ.