ಬೆಂಗಳೂರು, ಮಾ.27- ಆನೇಕಲ್ ತಾಲ್ಲೂಕು ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವದ ತೇರು ಬಿದ್ದಿರುವ ಘಟನೆಯ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ಪ್ರಶಾಂತ್ ಹಾಗೂ ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಡಿ. ಅವರನ್ನು ಇಲಾಖೆ ವಿಚಾರಣೆ ಬಾಕಿ ಉಳಿಸಿ ಅಮಾನತುಗೊಳಿಸಿ ಆದೇಶಿಸಲಾಗಿದೆ.
ತೇರು ಬಿದ್ದ ಘಟನೆಯನ್ನು ತಡೆಯಲು ಸ್ಥಳದಲ್ಲಿದ್ದ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ವಿಫಲರಾಗಿದ್ದಾರೆ ಎಂದು ಆನೇಕಲ್ ತಾಲ್ಲೂಕು ತಹಸೀಲ್ದಾರ್ ನೀಡಿದ್ದ ವರದಿಯ ಆಧಾರದ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಇವರಿಬ್ಬರನ್ನೂ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸರ್ಜಾಪುರ ಹೋಬಳಿಯ ಹುಸ್ಕೂರು ವೃತ್ತದ ರಾಜಸ್ವ ನಿರೀಕ್ಷಕ ಪ್ರಶಾಂತ್ ಹುಸ್ಕೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅಮಾನತುಗೊಂಡಿರುವ ಪ್ರಶಾಂತ್ ಅವರನ್ನು ಬೆಂಗಳೂರು ಪೂರ್ವ ತಾಲ್ಲೂಕು ಕೆ.ಆರ್.ಪುರ ವೃತ್ತಕ್ಕೂ ಹಾಗೂ ಕಾರ್ತಿಕ್ ಡಿ. ಅವರನ್ನು ಮಾರತಹಳ್ಳಿ ಹೋಬಳಿಯ ಎಚ್‌ಎಎಲ್ ಸ್ಯಾನಿಟರಿ ಬೋರ್ಡ್ ವೃತ್ತಕ್ಕೆ ಸ್ಥಳ ನಿಯುಕ್ತಿಗೊಳಿಸಿದ್ದಾರೆ. ಇವರಿಬ್ಬರೂ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಕಾರ್ಯ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಿದ್ದಾರೆ.
ಮಾ.22 ರಂದು ನಡೆದ ಮದ್ದೂರಮ್ಮ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಾಯಸಂದ್ರ ಗ್ರಾಮದ ತೇರು ನೆಲಕ್ಕೆ ಅಪ್ಪಳಿಸಿದ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.