ಬೆಂಗಳೂರು,ಮೇ 24- ತಮ ಪತಿ ಮಡೆನೂರು ಮನು ಅವರಿಗೂ, ಸಂತ್ರಸ್ತೆಗೂ ಇರುವ ಸಂಬಂಧದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಮನು ಅವರ ಪತ್ನಿ ದಿವ್ಯ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಮನು ಪ್ರೀತಿಸಿ ವಿವಾಹವಾಗಿದ್ದು, ಅವರನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಆತ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.
ಸಂತ್ರಸ್ತೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಆಕೆ ಮಾಡಿರುವ ಎಲ್ಲಾ ಆರೋಪಗಳಿಗೂ ನಾವು ನ್ಯಾಯಾಲಯದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಒದಗಿಸುತ್ತೇವೆ. ನನ್ನ ಪತಿ ತಪ್ಪು ಮಾಡಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ ಎಂದಿದ್ದಾರೆ.
ಈ ಆರೋಪಗಳನ್ನು ಕೇಳಿದಾಗ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಮಡೆನೂರು ಮನು ನಾಯಕ ನಟನಾಗಬೇಕು ಎಂದು 15 ವರ್ಷಗಳ ಕಾಲ ಕಷ್ಟಪಟ್ಟಿದ್ದಾರೆ. ಹಗಲು-ರಾತ್ರಿ ಎನ್ನದೆ ದುಡಿದಿದ್ದಾರೆ. ಅವರ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಜೈಲಿನಲ್ಲಿ ಕುಳಿತುಕೊಳ್ಳುವಂತಾಗಿದೆ. ಅಷ್ಟೂ ವರ್ಷದ ಶ್ರಮದ ಫಲ ನೋಡಲು ಅವರಿಲ್ಲದಿರುವುದು ತೀವ್ರ ದುಃಖವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ನಮ ಸಂಬಂಧದ ಬಗ್ಗೆ ಮನು ಅವರ ಪತ್ನಿಗೆ ಗೊತ್ತಿತ್ತು, ಹೊರಗಡೆ ಹೇಗಾದರೂ ಇರಿ, ಮನೆಯಲ್ಲಿ ಸರಿಯಾಗಿ ಇರಿ ಎಂದು ಆಕೆ ಹೇಳಿದ್ದಾರೆ ಎಂದು ಸಂತ್ರಸ್ತೆ ಹೇಳಿರುವುದಕ್ಕೆ ಕಿಡಿಕಾರಿರುವ ದಿವ್ಯ ಮನೆಯವರು ಹೊರಗಡೆ ಹೋಗುವಾಗ ಹುಷಾರಾಗಿರಿ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳಬೇಡಿ, ಎಲ್ಲರ ಜೊತೆ ಸ್ನೇಹದಿಂದಿರಿ ಎಂದು ಹೇಳುವುದು ಸಾಮಾನ್ಯ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವುದು ಸರಿಯಲ್ಲ ಎಂದಿದ್ದಾರೆ.
ಸಂತ್ರಸ್ತೆ ಮತ್ತು ಮನು ಒಂದು ಕಾರ್ಯಕ್ರಮದ ಮೂಲಕ ಪರಿಚಯವಾದರು. ಸ್ನೇಹಿತರಾಗಿದ್ದರು. ಅನೇಕ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಎಲ್ಲರಂತೆ ನಮ ಮನೆಗೂ ಬಂದಿದ್ದಾರೆ. ನಾನು ಅವರನ್ನು ಸಹಜವಾಗಿಯೇ ನೋಡುತ್ತಿದ್ದೆ. ಆದರೆ ನಮಿಬ್ಬರ ನಡುವೆ ಆತೀಯವಾದ ಯಾವುದೇ ಮಾತುಕತೆಗಳು ಅಥವಾ ಒಡನಾಟ ಇರಲಿಲ್ಲ. ಅತಿಥಿಗಳನ್ನು ಅತಿಥಿಯಂತೆಯೇ ನೋಡಿದ್ದೇನೆ ಎಂದರು.
ಈಗ ಷಡ್ಯಂತ್ರ ಮಾಡಿ ನನ್ನ ಗಂಡನನ್ನು ಸಿಲುಕಿಸಲಾಗಿದೆ. ಒಂದು ವೇಳೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇ ಆಗಿದ್ದರೆ ಆ ವೇಳೆಯಲ್ಲೇ ದೂರು ನೀಡಬಹುದಿತ್ತು. ಅಥವಾ ಚಿತ್ರ ಬಿಡುಗಡೆ ನಂತರ ದೂರು ನೀಡಲು ಅವಕಾಶಗಳಿದ್ದವು. ಸಿನಿಮಾ ಬಿಡುಗಡೆ ಸಂದರ್ಭದಲ್ಲೇ ಏಕೆ ಈ ರೀತಿ ಮಾಡಿದರು? ಒಬ್ಬ ವ್ಯಕ್ತಿ ಬೆಳೆಯುವುದನ್ನು ತುಳಿಯಲು ಎಷ್ಟೆಲ್ಲಾ ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತದೆ ಎಂದು ಹೇಳಿದರು.
ಸಂತ್ರಸ್ತೆ ಬಳಿ ಏನೆಲ್ಲಾ ಸಾಕ್ಷ್ಯಗಳಿವೆಯೋ ಅವುಗಳನ್ನು ಕೋರ್ಟ್‌ಗೆ ಕೊಡಲಿ. ನಮ ಬಳಿ ಇರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡುತ್ತೇವೆ. ಆಡಿಯೊ, ವಿಡಿಯೋಗಳನ್ನೆಲ್ಲಾ ನೋಡಿದಾಗ ದುಃಖವಾಗುತ್ತದೆ. ಅದು ನಡೆದಿದೆಯೋ, ಇಲ್ಲವೋ ಗೊತ್ತಿಲ್ಲ, ಕಾನೂನಿಗೆ ಎಲ್ಲವನ್ನೂ ಬಿಡುತ್ತೇವೆ ಎಂದರು.ನಾನು ನನ್ನ ಪತಿಯ ಜೊತೆ ದೃಢವಾಗಿ ನಿಲ್ಲುತ್ತೇನೆ. ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಕೀಲರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.