ನವದೆಹಲಿ, ನ.23- ಭಾರೀ ಹಣಾಹಣಿಯಿಂದ ಕೂಡಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದ್ದು, ಸರ್ಕಾರ ರಚನೆ ನಿರೀಕ್ಷೆಯಲ್ಲಿದ್ದ ಮಹಾವಿಕಾಸ್ ಅಗಾಡಿಗೆ ಭಾರೀ ಮರ್ಮಾಘಾತವಾಗಿದೆ.ಜಾರ್ಖಂಡ್‌ನಲ್ಲಿ ಎರಡನೆ ಬಾರಿಗೆ ಜೆಎಂಎಂ ನೇತೃತ್ವದ ಇಂಡಿ ಮೈತ್ರಿಕೂಟ ಮತ್ತೆ ಅಧಿಕಾರ ರಚನೆಯತ್ತ ದಾಪುಗಾಲಿಟ್ಟಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರೀ ಹಿನ್ನಡೆಯಾಗಿದೆ.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಮಹಾಯುತಿ 220, ಮಹಾವಿಕಾಸ್ ಅಗಡಿ 57 ಹಾಗೂ ಇತರರು 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 30, ಇಂಡಿ 50 ಹಾಗೂ ಇತರರು ಒಂದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.ದೇಶದ ಅತಿದೊಡ್ಡ ಪ್ರಮುಖ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನೆ-ಎನ್‌ಸಿಪಿ-ಆರ್‌ಪಿಐ ನೇತೃತ್ವದ ಮಹಾಯುತಿ ಮೈತ್ರಿಕೂಟ 220 ಕ್ಷೇತ್ರಗಳನ್ನು ಗೆದ್ದು ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.
ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಕೂಡ ಮಹಾಯುತಿ ಇಷ್ಟುದೊಡ್ಡ ಪ್ರಮಾಣದಲ್ಲಿ ಗೆಲ್ಲಲಿದೆ ಎಂಬ ಭವಿಷ್ಯವನ್ನು ನುಡಿದಿರಲಿಲ್ಲ. ಮಹಾಯುತಿ ಆರ್ಭಟಕ್ಕೆ ಮಹಾವಿಕಾಸ್ ಅಗಡಿ ಧೂಳಿಪಟವಾಗಿದ್ದು, ಕೇವಲ ಎರಡಂಕಿಗೆ ಇಳಿದಿದೆ.ಇದೇ 29ರಂದು ಮಹಾರಾಷ್ಟ್ರದಲ್ಲಿ ಎರಡನೆ ಬಾರಿಗೆ ಮಹಾಯುತಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಮುಖ್ಯಮಂತ್ರಿ ಹುದ್ದೆ ಯಾರಿಗೆ ಎಂಬುದು ಒಂದೆರಡು ದಿನಗಳಲ್ಲಿ ತೀರ್ಮಾನವಾಗಲಿದೆ.
ಮಹಾರಾಷ್ಟ್ರದ ಕೊಂಕಣ್, ಪುಣೆ, ನಾಸಿಕ್, ಮರಾಠ್‌ವಾಡ, ವಿದರ್ಭ, ಉತ್ತರ ಮಹಾರಾಷ್ಟ್ರ, ಪಶ್ಚಿಮ ಮಹಾರಾಷ್ಟ್ರ ಸೇರಿದಂತೆ ಬಹುತೇಕ ಎಲ್ಲ ಕಡೆ ಮಹಾಯುತಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಹಮ್ ಏಕ್ ಹೈ ತೋ ಸೇಫ್ ಹೈ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಟೇಂಗೇ ತೋ ಪಟೆಂಗೇ ಘೋಷವಾಕ್ಯ ಹಿಂದೂ ಮತಗಳ ಧೃವೀಕರಣಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆಗೂ ಮುನ್ನ ಕಳೆದ ವರ್ಷ ಜಾರಿಮಾಡಿದ್ದ ಲಾಡ್‌ಲೀ ಬೆಹನ್ ಯೋಜನೆ ಮಹಾಯುತಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಹಿಳಾ ಮತದಾರರು ಭಾರೀ ಪ್ರಮಾಣದಲ್ಲಿ ಮೈತ್ರಿಕೂಟಕ್ಕೆ ಮತ ಚಲಾಯಿಸಿರುವುದು ಫಲಿತಾಂಶದಿಂದಲೇ ಸಾಬೀತಾಗಿದೆ.
ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಡೆದು ಸರ್ಕಾರ ರಚಿಸಿದ್ದ ಮಹಾಯುತಿಯು ಚುನಾವಣೆಗೂ ಮುನ್ನ ಹಲವು ಜನಪರ ಯೋಜನೆಗಳನ್ನು ಜಾರಿಮಾಡಿತ್ತು. ಇದು ಕೂಡ ಮತದಾರರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಗೆಲುವು ದಕ್ಕಿಸಿಕೊಂಡಿದೆ.
ಲೋಕಸಭೆ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಗೆಲುವು ಸಾಧಿಸಿದ್ದ ಮಹಾವಿಕಾಸ್ ಅಗಡಿ ಲೆಕ್ಕಾಚಾರ ತಲೆಕೆಳಗಾಗಿದೆ. ರಾಜ್ಯದಲ್ಲಿ ಈ ಬಾರಿ ನಾವೇ ಸರ್ಕಾರ ರಚನೆ ಮಾಡುತ್ತೇವೆಂಬ ದೃಢವಾದ ಆತವಿಶ್ವಾಸದಲ್ಲಿದ್ದ ಕಾಂಗ್ರೆಸ್, ಶಿವಸೇನೆ ಎನ್‌ಸಿಪಿ ನಾಯಕರಿಗೆ ಮತದಾರ ತಕ್ಕಪಾಠ ಕಲಿಸಿದ್ದಾನೆ.
ಕಳೆದ ಹಲವು ಚುನಾವಣೆಗಳಲ್ಲಿ ಸದಾ ಕಿಂಗ್‌ಮೇಕರ್ ಆಗುತ್ತಿದ್ದ ಶರದ್‌ಪವಾರ್ ನೇತೃತ್ವದ ಎನ್‌ಸಿಪಿ, ಮರಾಠಿಗರ ಮೇಲೆ ಪ್ರಾಬಲ್ಯ ಸಾಧಿಸಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸಂಪೂರ್ಣವಾಗಿ ನೆಲಕಚ್ಚಿದೆ.
ಎನ್‌ಸಿಪಿಯಿಂದ ಹೊರಬಂದು ತಮ ನೇತೃತ್ವದ ಬಣ ಕಟ್ಟಿದ್ದ ಅಜಿತ್‌ಪವಾರ್ ಫೀನಿಕ್‌್ಸನಂತೆ ಮತ್ತೆ ಗೆದ್ದಿರುವುದು ಈ ಚುನಾವಣಾ ಫಲಿತಾಂಶದ ಅಚ್ಚರಿಗಳಲ್ಲೊಂದು.ಸೊರೇನ್‌ಗೆ ಗೆಲುವು: ಆದಿವಾಸಿ, ಗುಡ್ಡಗಾಡು ಹಾಗೂ ನಕ್ಸಲ್ ಪೀಡಿತ ರಾಜ್ಯವಾಗಿರುವ ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಇಂಡಿ ಮೈತ್ರಿಕೂಟ ಎರಡನೆ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈ ಬಾರಿ ಸರ್ಕಾರ ರಚನೆ ಮಾಡಿಯೇ ತೀರುತ್ತೇವೆಂಬ ಆತವಿಶ್ವಾಸದಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ತೀವ್ರ ಹಿನ್ನಡೆ ಕಂಡಿದೆ.ಚುನಾವಣೆಗೂ ಮುನ್ನ ಜೆಎಂಎಂ ಹಾಗೂ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ನಾಯಕರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿದ್ದರೂ ಬಹುತೇಕ ಪ್ರಮುಖ ನಾಯಕರೇ ಸೋಲು ಅನುಭವಿಸಿದ್ದಾರೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಚಂಪಾ ಸೊರೇನ್ ಸೋಲು ಬಿಜೆಪಿಗೆ ತೀವ್ರ ಮುಖಭಂಗ ಉಂಟುಮಾಡಿದೆ.
ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದ ಹೇಮಂತ್ ಸೊರೇನ್ ಬಳಸಿದ ಅಸ್ತ್ರ ಆದಿವಾಸಿಗಳ ಪ್ರಾಬಲ್ಯವಿರುವ ಕಡೆ ಜೆಎಂಎಂ ಹೆಚ್ಚಿನ ಗೆಲುವು ಕಂಡಿದೆ. ಎರಡೂ ರಾಜ್ಯಗಳ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆಗಳಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಸೋಲು ಇಂಡಿ ಮೈತ್ರಿಕೂಟಕ್ಕೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ.
ಕಾರ್ಯಕರ್ತರ ಸಂಭ್ರಮ :
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಯುತಿ ಮೈತ್ರಿ ಅಧಿಕಾರದತ್ತ ದಾಪುಗಾಲು ಇಡುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತು.ಭಾರೀ ಬಹುಮತದತ್ತ ಮಹಾಯುತಿ ಮೈತ್ರಿ ಪಡೆ ಮುನ್ನುಗ್ಗುತ್ತಿದ್ದಂತೆ ಬಿಜೆಪಿ ಕಚೇರಿ ಏಕನಾಥ್ ಸಿಂಧೆ ಕಚೇರಿ ಬಳಿ ಜಮಾಯಿಸಿದ ಅಭಿಮಾನಿಗಳು ವಿಜಯದ ಘೋಷಣೆ ಮೊಳಗಿಸಿದರು.
ನಾಳೆಯೇ ನೂತನ ಶಾಸಕರ ಸಭೆ ಕರೆಯಲಿದ್ದು, ನಂ. 26ಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆಗೆ ಖಚಿತ ಫಲಿತಾಂಶ ಹೊರಬೀಳಲಿದ್ದು, ಎಲ್ಲಾ ಶಾಸಕರ ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ನ.26ರಂದು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗಲಿದ್ದು, ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುವುದು ಕುತೂಹಲ ಕೆರಳಿಸಿದೆ.